ಬ್ರಿಗೇಡ್ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಮತ್ತೆ ಯಡ್ಡಿಗೆ ಸೆಡ್ಡು ಹೊಡೆದ ಈಶು

ಗುರುವಾರ, 19 ಜನವರಿ 2017 (18:35 IST)
ರಾಯಣ್ಣ ಬ್ರಿಗೇಡ್ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಸೆಡ್ಡು ಹೊಡೆದಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ರಾಯಣ್ಣ ಬ್ರಿಗೇಡ್‌ ಸಮಾವೇಶ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್ ಪಾಲಿಟಿಕಲ್ ಸಂಘಟನೆಯಲ್ಲ. ಹೀಗಾಗಿ ಬ್ರಿಗೇಡ್ ನಿಲ್ಲಿಸಿ ಎಂದು ಹೇಳಲು ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ಅವಕಾಶ ಇಲ್ಲ. ಬ್ರಿಗೇಡ್‌ನಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಡ್ಯಾಮೆಜ್ ಆಗಲ್ಲ ಎಂದು ಭರವಸೆ ನೀಡಿದರು.
 
ಬ್ರಿಗೇಡ್ ವಿವಾದದ ಕುರಿತು ಯಡಿಯೂರಪ್ಪ ಅವರ ಸಮ್ಮುಖದಲ್ಲಿಯೇ ಹಿರಿಯ ನಾಯಕರೊಂದಿಗೆ ಎರಡು ಬಾರಿ ಚರ್ಚಿಸಿದ್ದೇವೆ. ಸಾಧುಸಂತರ ನೇತೃತ್ವದಲ್ಲಿ ಬ್ರಿಗೇಡ್‌ ಮುಂದುವರೆಸಿ ಎಂದು ನಾಯಕರು ಹೇಳಿದ್ದಾರೆ. ಆದರೂ, ಬ್ರಿಗೇಡ್‌ಗೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ರಾಜ್ಯ ಬಿಜೆಪಿ ಪಾಳಯದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನ ಹೊಸ ಸಂಘಟನೆ ಹುಟ್ಟು ಹಾಕುವ ಮೂಲಕ ಪಕ್ಷದಲ್ಲಿ ತಮ್ಮ ಬಲ ಪ್ರದರ್ಶನ ಮಾಡಲು ಕೆ.ಎಸ್.ಈಶ್ವರಪ್ಪ ಮುಂದಾಗಿದ್ದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ