ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಮೇಲೆ ಐಟಿ ದಾಳಿ ಹಿನ್ನೆಲೆ, ಹುಬ್ಬಳ್ಳಿ ತಾಲೂಕಿನ ಹೆಬಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಕರ್ ರೆಡ್ಡಿ ಒಬ್ಬ ಉದ್ಯಮಿ ಇದ್ದಾರೆ, ಇಂತಹ ಐಟಿ ದಾಳಿ ಸಾಮಾನ್ಯ. ಅದು ಯಾಕೆ ಅಂತ ಎಲ್ಲರಿಗೂ ಗೊತ್ತು. ಇನ್ನೂ ಎರಡು-ಮೂರು ತಿಂಗಳು ಇಂತಹ ಐಟಿ ದಾಳಿಗಳು ವಿರೋಧ ಪಕ್ಷಗಳ ಮೇಲೆ ನಡೆಯುತ್ತವೆ. ಇದು ಯಾಕೆ ಅಂತ ಎಲ್ಲರಿಗೂ ಗೊತ್ತು, ಈ ಬಗ್ಗೆ ಜಾಸ್ತಿ ಮಾತನಾಡುವ ಅವಶ್ಯಕತೆಯಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡುವುದು ತೌಡು ಕುಟ್ಟುವ ಕೆಲಸದಂತೆ, ಕೇವಲ ಚರ್ಚೆಯಿಂದ ಏನೂ ಸಾಧ್ಯವಿಲ್ಲ. ಎಲ್ಲಾ ಭ್ರಷ್ಟಾಚಾರ ಆರೋಪಗಳಿಗೆ ದಾಖಲೆ ಒದಗಿಸಲು ಸಾಧ್ಯವಿಲ್ಲ ಎಂದು ಹೆಚ್ಡಿಕೆ ತಮ್ಮ ಪಕ್ಷದ ಮುಖಂಡನನ್ನ ಸಮರ್ಥಿಸಿಕೊಂಡರು. ಬಿಜೆಪಿ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ಡಿಕೆ, ಕಾಂಗ್ರೆಸ್ನ ಈ ಆರೋಪ ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ, ಬಿಜೆಪಿಯವರು ಅವರ ಆತ್ಮಸಾಕ್ಷಿಗೆ ಉತ್ತರ ಕೊಡಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಮಾನ್ಯ, ಇದಕ್ಕೆ ದಾಖಲೆ ನೀಡಲ್ಲ. ನಾನು ಈ ಹಿಂದೆ ಭ್ರಷ್ಟಾಚಾರದ ಆರೋಪಗಳಿಗೆ ದಾಖಲೆ ನೀಡಿದ್ದೆ, ಆದರೆ ಆ ದಾಖಲೆಗಳಿಂದ ಕಾಂಗ್ರೆಸ್ ಅನುಕೂಲ ಮಾಡಿಕೊಂಡಿತು. ಕಾಂಗ್ರೆಸ್ ನಂಬಿದ್ರೆ ಅಕ್ಕಿನೂ ಸಿಗಲ್ಲ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.