ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳಿಗೆ ಪ್ರವೇಶವಿಲ್ಲ

ಗುರುವಾರ, 9 ಡಿಸೆಂಬರ್ 2021 (17:10 IST)
ಕಬ್ಬನ್ ಪಾರ್ಕ್ ಒಳಗೆ ಇನ್ನು ಮುಂದೆ ಸಾಕು ನಾಯಿ ಆಗಲೀ ಬೀದ ನಾಯಿ ಆಗಲೀ ಪ್ರವೇಶ ಮಾಡುವಂತಿಲ್ಲ. ಕಬ್ಬನ್ ಉದ್ಯಾನವನದಲ್ಲಿ ಇನ್ಮುಂದೆ ನಾಯಿಗಳು ಕಾಣಿಸಿಕೊಂಡರೆ ಬಿಬಿಎಂಪಿ ಅಧಿಕಾರಿಗಳ ತಲೆದಂಡ ಖಚಿತ! ಯಾಕೆಂದರೆ ಇಂತಹ ಮಹತ್ವದ ಆದೇಶವನ್ನು ಹೈಕೋರ್ಟ್ ನೀಡಿದೆ.ಕಬ್ಬನ್ ಪಾರ್ಕ್‌ನಲ್ಲಿ ಬೀದಿ ನಾಯಿಗಳಿಗೆ ಅವಕಾಶ ಕೊಟ್ಟಿರುವ ಸಂಬಂಧ ಹೈಕೋರ್ಟ್ ಬಿಬಿಎಂಪಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕಬ್ಬನ್ ಉದ್ಯಾನವನದಲ್ಲಿ ಬೀದಿ ನಾಯಿಗಳ ಹಾವಳಿ ಕುರಿತ ಅರ್ಜಿ ವಿಚಾರಣೆ ನಡಸಿದ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ಕಬ್ಬನ್ ಪಾರ್ಕ್ ಒಳಗೆ ಕೆಲವರು ಸಾಕು ನಾಯಿಗಳನ್ನು ತಂದು ಮಲ ಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಸಾಕು ನಾಯಿ ನೋಡಿ ಬೀದಿ ನಾಯಿಗಳು ಕಬ್ಬನ್ ಪಾರ್ಕ್ ಒಳಗೆ ಬರುತ್ತಿವೆ.ಇದರಿಂದ ಸಾರ್ವಜನಿಕರು ಓಡಾಡುವುದು ಕಷ್ಟ. ಕಬ್ಬನ್ ಪಾರ್ಕ್ ಒಳಗೆ ಬೀದಿ ನಾಯಿಗಳು ಪ್ರವೇಶಿಸದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಜರುಗಿಸಿ ವರದಿಯನ್ನು ನ್ಯಾಯಾಯಲಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
 
ಕಬ್ಬನ್ ಪಾರ್ಕ್ ಒಳಗೆ ನಾಯಿಗಳನ್ನು ಬಿಡುತ್ತಿರುವುದರಿಂದ ಜನರು ಪಾರ್ಕಿನಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಬೀದಿ ನಾಯಿಗಳು ಪ್ರವೇಶ ಮಾಡುತ್ತಿವೆ. ಬೀದಿ ನಾಯಿಗಳಿಗೆ ಕೆಲವರು ಊಟ ತಂದು ಹಾಕುತ್ತಾರೆ. ಊಟ ಇಲ್ಲದ ವೇಳೆ ನಾಯಿಗಳು ಆಕ್ರೋಶಗೊಂಡು ದಾಳಿ ಮಾಡುತ್ತವೆ. ಇದು ಅಪಾಯಕಾರಿ. ಇನ್ನು ಸಾಕು ನಾಯಿಗಳನ್ನು ಮಾಲೀಕರು ತಂದು ಪಾರ್ಕ್ ಒಳ ಭಾಗದಲ್ಲಿ ಮಲ- ಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಇದರಿಂದ ಜನರಿಗೆ ಪಾರ್ಕಿನಲ್ಲಿ ಓಡಾಡಲು ಕಷ್ಟವಾಗುತ್ತದೆ. ಪಾರ್ಕ್ ಒಳಗೆ ನಾಯಿಗಳು ಬಾರದಂತೆ ಬಿಬಿಎಂಪಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ