ಬೆಂಗಳೂರು(ಜು.26): ಕೊರೋನಾ ಆತಂಕದ ನಡುವೆಯೇ ಇಂದಿನಿಂದ ಪದವಿ ಕಾಲೇಜುಗಳು ಪ್ರಾರಂಭವಾಗುತ್ತಿವೆ. ಎರಡನೇ ಅಲೆಯಿಂದ ಮುಚ್ಚಿದ್ದ ಪದವಿ ಕಾಲೇಜುಗಳು, 4 ತಿಂಗಳ ಬಳಿಕ ಮತ್ತೆ ತೆರೆಯುತ್ತಿವೆ. ಪದವಿ ಜೊತೆ ಎಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳೂ ಸಹ ಇಂದಿನಿಂದ ಶುರುವಾಗುತ್ತಿವೆ.
ಉನ್ನತ ಶಿಕ್ಷಣ ಇಲಾಖೆ ಮುಂಜಾಗ್ರತಾ ಕ್ರಮಗಳೊಂದಿಗೆ ಪದವಿ ಕಾಲೇಜು ಪ್ರಾರಂಭಕ್ಕೆ ಸೂಚನೆ ನೀಡಿದೆ. ಕಡ್ಡಾಯವಾಗಿ ಕೊರೋನಾ ನಿಯಮ ಪಾಲನೆ ಮಾಡಲೇಬೇಕೆಂದು ಸಹ ಉನ್ನತ ಶಿಕ್ಷಣ ಇಲಾಖೆ ಹೇಳಿದೆ.
ಹಾಗಿದ್ರೆ ಪದವಿ ಕಾಲೇಜುಗಳ ಪ್ರಾರಂಭಕ್ಕೆ ಏನೆಲ್ಲ ಸಿದ್ದತೆ ಆಗಿದೆ? ಎಂಬುದನ್ನು ನೋಡುವುದಾದರೆ, ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನ ಯಶಸ್ವಿಯಾಗಿದೆ. ಹೌದು ಸರ್ಕಾರ ಕಾಲೇಜು ಪ್ರಾರಂಭಕ್ಕೂ ಮುನ್ನ ಲಸಿಕೆ ಅಭಿಯಾನ ಶುರು ಮಾಡಿತ್ತು. ಬಹುತೇಕ ವಿದ್ಯಾರ್ಥಿಗಳಿಗೆ ಒಂದು ಡೋಸ್ ಲಸಿಕೆ ಅಭಿಯಾನ ಅಂತ್ಯವಾಗಿದೆ. ರಾಜ್ಯಾದ್ಯಂತ ಸುಮಾರು 74% ವಿದ್ಯಾರ್ಥಿಗಳಿಗೆ ಒಂದು ಡೋಸ್ ಲಸಿಕೆ ಹಾಕಲಾಗಿದೆ. ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗಕ್ಕೂ ಲಸಿಕೆ ಅಭಿಯಾನ ಯಶಸ್ವಿಯಾಗಿದೆ. ಲಸಿಕೆ ಅಭಿಯಾನದ ಬಳಿಕ ಶಿಕ್ಷಣ ಇಲಾಖೆ ಕಾಲೇಜು ಪ್ರಾರಂಭ ಮಾಡಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರದಿದ್ದರೂ ಅಧ್ಯಾಪಕರಿಗೆ ಹಾಜರಾತಿ ಕಡ್ಡಾಯ ಎಂದು ಹೇಳಿದೆ.
ಕಾಲೇಜು ಪ್ರಾರಂಭಕ್ಕೆ ಮಾರ್ಗಸೂಚಿಗಳೇನು..?
ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಯಾವೆಲ್ಲಾ ನಿಯಮ ಪಾಲಿಸಬೇಕು..? ಎಂಬುದನ್ನು ಉನ್ನತ ಶಿಕ್ಷಣ ಇಲಾಖೆ ಹೇಳಿದೆ. ಅವುಗಳಲ್ಲಿ,
•ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
•ಲಸಿಕೆ ಹಾಕಿಸದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶವಿಲ್ಲ.
•ಯಾವುದೇ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರೋದು ಕಡ್ಡಾಯ ಅಲ್ಲ.
•ವಿದ್ಯಾರ್ಥಿಗಳು ಸ್ವ ಇಚ್ಚೆಯಿಂದ ಕಾಲೇಜಿಗೆ ಬರಬೇಕು.
•ಕಾಲೇಜು ಪ್ರಾರಂಭ ಆದ್ರೂ ಆನ್ ಲೈನ್ ಕ್ಲಾಸ್ ಮುಂದುವರಿಯಲಿದೆ.
•ಆನ್ ಲೈನ್/ಆಫ್ ಲೈನ್ ಯಾವುದಾದರೂ ಒಂದಕ್ಕೆ ಹಾಜರಾತಿ ಕಡ್ಡಾಯ.
•ಸರ್ಕಾರ ಹಾಜರಾತಿಯನ್ನ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದೆ.
•ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗಕ್ಕೆ 2 ಡೋಸ್ ಲಸಿಕೆ ಕಡ್ಡಾಯ
•ಪ್ರತಿ ಕಾಲೇಜಿನಲ್ಲೂ ಕಡ್ಡಾಯವಾಗಿ ಕೊರೋನಾ ಮಾರ್ಗಸೂಚಿ ಪಾಲನೆಗೆ ಕ್ರಮ ವಹಿಸಿಬೇಕು.
•ಕಾಲೇಜಿಗೆ ಬರೋ ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.
•ಕಾಲೇಜು ಮುಗಿದ ಬಳಿಕ ಕೊಠಡಿಗಳ ಸ್ಯಾನಿಟೈಸರ್ ಕಡ್ಡಾಯ.
•ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ.
•ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಾಲೇಜು ಆಡಳಿತ ಮಂಡಳಿ ಕ್ರಮವಹಿಸಬೇಕು.
•ಕಾಲೇಜು, ವಿವಿ ಆವರಣದಲ್ಲಿ ಆರೋಗ್ಯ ಸಹಾಯವಾಣಿ ಪ್ರಾರಂಭಿಸಬೇಕು.
•ಕಾಲೇಜು, ವಿವಿಗಳಲ್ಲಿ ಈಜು ಕೊಳಗಳ ಪ್ರಾರಂಭಕ್ಕೆ ನಿಷೇಧ ಹೇರಲಾಗಿದೆ.
•ಲೈಬ್ರರಿಗಳಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು
•ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿ ಪಾಲನೆ ಕಡ್ಡಾಯ
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಭಾನುವಾರ 1001 ಸಾವಿರ ಕೊರೊನಾ ಕೇಸ್ ಪತ್ತೆಯಾಗಿದ್ದು, 22 ಜನ ಕೊರೋನಾಗೆ ಬಲಿಯಾಗಿದ್ದಾರೆ. 1465 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ 165 ಕೇಸ್ ಪತ್ತೆಯಾಗಿದ್ದು, 3 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ನಿನ್ನೆ ರಾಜ್ಯದಲ್ಲಿ ಪಾಸಿಟಿವಿಟಿ ದರ 0.68 % ರಷ್ಟಿದೆ. ಸಾವಿನ ಪ್ರಮಾಣ 2.19 % ರಷ್ಟಿದೆ.