ರಾಜ್ಯಕ್ಕೆ ನೋ ಎಂಟ್ರಿ..!

ಭಾನುವಾರ, 8 ಆಗಸ್ಟ್ 2021 (14:36 IST)
ಚಾಮರಾಜನಗರ ( ಆ.08): ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ  ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ  ಗಡಿ ಭಾಗದ ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ  ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗಡಿಭಾಗದ  ಚೆಕ್ಪೋಸ್ಟ್ ಗಳಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ
ಜಿಲ್ಲೆಯ ಮೂಲೆಹೊಳೆ, ಕೆಕ್ಕನಹಳ್ಳ, ಪಾಲಾರ್, ಪುಣಜನೂರು, ಅರ್ಧನಾರೀಪುರ, ನಾಲಾರೋಡ್ ಈ  ಆರು ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. 72 ಗಂಟೆ ಒಳಗೆ ಮಾಡಿಸಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರವೇಶಾವಾಕಾಶ ನೀಡಲಾಗುತ್ತಿದೆ.
ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ  ಆರ್. ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ್ ಇದ್ದರೂ  ಸಹ ಪ್ರವೇಶ ನಿರಾಕರಿಸಲಾಗುತ್ತಿದೆ. ಚೆಕ್ ಪೋಸ್ಟ್ ಗಳಲ್ಲೇ  ಅಧಿಕಾರಿಗಳು  ವಾಹನಗಳನ್ನು  ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಅಗತ್ಯ ಹಾಗು ತುರ್ತು ಸೇವೆ ವಾಹನಗಳಿಗಷ್ಟೇ ಪ್ರವೇಶಾವಕಾಶ ನೀಡಲಾಗುತ್ತಿದೆ. ಕೇರಳ ಹಾಗೂ ತಮಿಳುನಾಡಿನಿಂದ  ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ  ಪ್ರವಾಸಕ್ಕೆಂದು ಬರುತ್ತಿದ್ದಾರೆ. ಆದರೆ  ಇಲ್ಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಈಗಾಗಲೇ ನಿರ್ಬಂಧ ಹೇರಲಾಗಿದೆ. ಹಾಗಾಗಿ  ಈ ಬಗ್ಗೆ  ಗಡಿ ಭಾಗದಲ್ಲೇ ಮಾಹಿತಿ ನೀಡಿ ವಾಪಸ್ ಕಳುಹಿಸಲಾಗುತ್ತಿದೆ.
ಅನಗತ್ಯವಾಗಿ ಬರುವವರಿಗೆ ನೆಗೆಟಿವ್ ರಿಪೋರ್ಟ್ ಇದ್ದರೂ ಸಹ ಪ್ರವೇಶ ನೀಡುತ್ತಿಲ್ಲ. ಅನಾರೋಗ್ಯ ಸೇರಿದಂತೆ ತುರ್ತು ಸಂದರ್ಭವಿದ್ದರೆ ಅಂತಹವರಿಗೆ ಮಾತ್ರ ಅದರಲ್ಲೂ ಕೊರೋನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ ಎಂದು ಪುಣಜನೂರು ಚೆಕ್ ಪೋಸ್ಟ್ ನೂಡಲ್ ಅಧಿಕಾರಿ ನಾಗನಾಯಕ ನ್ಯೂಸ್ 18 ಗೆ ತಿಳಿಸಿದರು.
ನಾಳೆಯಿಂದ  ನೆಗೆಟಿವ್ ವವರದಿ ಇದ್ದವರಿಗೆ ಮಾರ್ಗಸೂಚಿಯನುಸಾರ  ಎಂದಿನಂತೆ ಪ್ರವೇಶವಾಕಾಶ ನೀಡಲಾಗುವುದು. ಕೊರೋನಾ ನೆಗೆಟಿವ್ ಇಲ್ಲದಿದ್ದರೆ  ಯಾವುದೇ ಕಾರಣಕ್ಕೂ ಅಂತಹವರನ್ನು ವಾಪಸ್ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಬಿಕೋ ಎನ್ನುತ್ತಿರುವ ಮಹದೇಶ್ವರ ಬೆಟ್ಟ
ಕೇರಳದಲ್ಲಿ ಕೊರೋನಾ ಹೆಚ್ಚಳ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಿಗೆ ಆಷಾಡ ಶುಕ್ರವಾರ, ಭೀಮನ ಅಮಾವಾಸ್ಯೆ ಹಾಗೂ ಶನಿವಾರ ಭಾನುವಾರ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಹಾಗಾಗಿ ಮಲೈಮಹದೇಶ್ವರ ಬೆಟ್ಟ ಭೀಮನ ಅಮಾವಾಸ್ಯೆಯಾದ ಇಂದು ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ.
ಅಮಾವಾಸ್ಯೆ ದಿನ ಅದರಲ್ಲೂ ಭೀಮನ ಅಮಾವಾಸ್ಯೆ ದಿನದಂದು ಮಹದೇಶ್ವರನ ದರ್ಶನ ಪಡೆದರೆ ಇಷ್ಟಾರ್ಥ ಈಡೇರಿಕೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹಾಗಾಗಿ ಸಾಮಾನ್ಯವಾಗಿ ಪ್ರತಿವರ್ಷ ಭೀಮನ ಅಮಾವಾಸ್ಯೆಯಂದು ಮಲೈ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರು ಭಕ್ತರು ಆಗಮಿಸಿ ಮಹದೇಶ್ವರನ ದರ್ಶನ ಪಡೆಯುತ್ತಿದ್ದರು.
ಆದರೆ ಕಳೆದ ವರ್ಷದಂತೆ ಈ ಬಾರಿಯು ಭಕ್ತರ  ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ಇಡೀ ಮಹದೇಶ್ವರ ಬೆಟ್ಟ ಬಣಗುಡುತ್ತಿದೆ.  ದೇವಸ್ಥಾನದ ಅರ್ಚಕರು ಎಂದಿನಂತೆ ಸಾಂಪ್ರದಾಯಿಕವಾಗಿ ಮಹದೇಶ್ವರನಿಗೆ ಪೂಜೆ ಸಲ್ಲಿಸಿದರು ಬೆಳಗಿನ ಝಾವ 3  ಗಂಟೆಯಿಂದ ಮುಂಜಾನೆ 6.30 ರ ವರೆಗೆ  ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ