ಐದು ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನು ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡಿದರೆ ಫೋಡಿ ಅಥವಾ 11ಇ ನಕ್ಷೆ ದೊರೆಯುವುದಿಲ್ಲ. ಈ ಬಗ್ಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮನಿಶ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.ಆದರೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಿತಿಯನ್ನು 3 ಗುಂಟೆಗೆ ಇಳಿಕೆ ಮಾಡಲಾಗಿದೆ.
ಈ ನಾಲ್ಕು ಜಿಲ್ಲೆಗಳಲ್ಲಿ 3 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶವಿಲ್ಲ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 5 ಗುಂಟೆಯನ್ನು ಸರ್ಕಾರ ನಿಗದಿ ಮಾಡಿದೆ. ಕೃಷಿ ಉದ್ದೇಶಕ್ಕೆ ಉಪಯೋಗಿಸುವ ಭೂಮಿಯ ಸರ್ವೆ ನಂಬರ್ಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ತುಂಡು-ತುಂಡು ಭೂಮಿ ಮಾರಾಟ ಅಥವಾ ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಯಾರಿಗೆಲ್ಲ ವಿನಾಯಿತಿ?: ಹೊಸ ಆದೇಶಕ್ಕೂ ಮೊದಲು ಸರ್ವೆ ನಂಬರ್ ಅಥವಾ ಪಹಣಿಗಳಲ್ಲಿ ಕನಿಷ್ಠ ವಿಸ್ತೀರ್ಣಗಿಂತ ಕಡಿಮೆ ವಿಸ್ತೀರ್ಣ ಇದ್ದರೆ ಮುಂದುವರಿಯಲಿದೆ. ಅಂತಹ ಸರ್ವೆ ನಂಬರ್ ಮತ್ತು ಪಹಣಿಗಳು ಮಾನ್ಯವಾಗಿರುತ್ತವೆ. ಒಂದು ವೇಳೆ ಪಿತ್ರಾರ್ಜಿತವಾಗಿ/ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ನಿಗದಿತ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಹೊಸ ಪಹಣಿ ಮತ್ತು ಫೋಡಿ ರಚಿಸಬಹುದು. ಜತೆಗೆ ಈಗಾಗಲೇ ಪಹಣಿಗಳಲ್ಲಿ ದಾಖಲಾದ ಮತ್ತು ಅಸ್ತಿತ್ವದಲ್ಲಿ ಇರುವ ಮಾಲೀಕರ ಹಕ್ಕುಗಳ ಪ್ರಕಾರ ಫೋಡಿಯನ್ನು ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇದ್ದರೂ ಅನುಮತಿಸಲಾಗಿದೆ.