ಕೊರೊನಾ ವೈರಸ್ ಭೀತಿ ಬೇಡ : ಕೋಳಿ, ಮಾಂಸ ಬಿಂದಾಸ್ ಆಗಿ ತಿನ್ನಿ ಎಂದ ಸಚಿವ

ಬುಧವಾರ, 4 ಮಾರ್ಚ್ 2020 (20:57 IST)
ಕೊರೊನಾ ವೈರಸ್ ಭಯವಿಲ್ಲದೇ ಕೋಳಿ, ಮಾಂಸವನ್ನು ಬಿಂದಾಸ್ ಆಗಿ ತಿನ್ನಿ. ಹೀಗಂತ ರಾಜ್ಯದ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕರೋನ ವೈರಸ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ, ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ನಮ್ಮ ದೇಶದಲ್ಲಿ ಕೋಳಿಗಳಿಗೆ ಕರೋನ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ .

ಈ ವೈರಾಣು ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವೇನೂ ಇಲ್ಲ. ಸೋಂಕು ಪೀಡಿತ ಮನುಷ್ಯರ ಸಂಪರ್ಕದಿಂದ ಮಾತ್ರ ಈ ಸೋಂಕು ಇತರರಿಗೆ ಹರಡುವುದರ ಬಗ್ಗೆ ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ ಎಂದು ಪಶುಸಂಗೋಪನೆ ಹಾಗೂ ಹಜ್ ಮತ್ತು ವಕ್ಫ್ ಸಚಿವರಾದ ಪ್ರಭು ಚವ್ಹಾಣ್ ಹೇಳಿದ್ದಾರೆ.

ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಕುಕ್ಕಟ ಉದ್ಯಮಕ್ಕೆ ಪೆಟ್ಟು ಬೀಳುತ್ತಿದೆ.  ಸಾಮಾನ್ಯವಾಗಿ ಕೋಳಿ ಮಾಂಸವನ್ನು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ.

ಆದ್ದರಿಂದ, ಸಾರ್ವಜನಿಕರು ಕರೋನಾ ವೈರಾಣು ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿ ಕೊಡಬಾರದು ಎಂದು ಸಚಿವರು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ