ಹಿಂದಿ ಭಾಷೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ.
ಕರ್ನಾಟಕದಲ್ಲಿ ಎಂದಿಗೂ ಹಿಂದಿ ಹೇರಿಕೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಿಂದಿ ಹೇರಿಕೆ ಗುಲಾಮಗಿರಿಯ ಹೆಗ್ಗುರುತು ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಅವರು ಹಿಂದಿ ಹೇರುವಂತೆ ಅಥವಾ ಹಿಂದಿಯನ್ನು ಕಡ್ಡಾಯ ಮಾಡುವಂತೆ ಎಲ್ಲೂ ಹೇಳಿಲ್ಲ.
ಅವರ ಮಾತನ್ನು ಅನಗತ್ಯವಾಗಿ ಕೆಲವರು ತಪ್ಪಾಗಿ ಅರ್ಥೈಸಿ ಜನರ ಮುಂದಿಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಹಿಂದಿ ಭಾಷೆ ಹೇರಲು ಬಿಡುವುದಿಲ್ಲ. ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಮಾತ್ರ ಹಿಂದಿ ಬೇಕಾಗಿದೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ಕರ್ನಾಟಕದಲ್ಲೂ ಬಿಜೆಪಿಗೆ ಹಿಂದಿ ಬೇಕಾಗಿದೆ. ಅವರು ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಕರೆಯುತ್ತಿದ್ದು ಹಿಂದಿ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ.
ಸಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯಾಗಿದ್ದು ಕನ್ನಡವೂ ರಾಷ್ಟ್ರಭಾಷೆಯೇ ಎಂದು ಹೇಳಿದರು.