ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನದ ಮೇರೆಗೆ ಸಿಜೆಐ ಡಿವೈ ಚಂದ್ರಚೂಡ್ ಮನೆಗೆ ಗಣೇಶ ಪೂಜೆಗೆ ಹೋಗಿದ್ದಾರೆ. ಅದರಲ್ಲೇನಿದೆ ತಪ್ಪು. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಎಲ್ಲಿಯೂ ಹೋಗಬಾರದೆಂಬ ರೂಲ್ಸ್ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ನಡೆಸಿದ್ದ ಇಫ್ತಿಯಾರ್ ಕೂಟಕ್ಕೆ ಸಿಜೆಐ ಪಾಲ್ಗೊಳ್ಳಬಹುದು, ಪ್ರಧಾನಿ ನರೇಂದ್ರ ಮೋದಿ ಅವರು ಸಿಜೆಐ ಮನೆಗೆ ಗಣೇಶ ಉತ್ಸವಕ್ಕೆ ಹೋಗಬಾರದು ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ ಏನು ಬೇಕಾದರೂ ಮಾಡಲು ಸಿದ್ದ.
ನಾಗಮಂಗಲ ಗಲಭೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಮೆರವಣಿಗೆ ಹೋಗುವ ರಸ್ತೆ ಬದಿಯಲ್ಲಿ ಮಸೀದಿ ಇದೆ ಎಂಬ ಕಾರಣಕ್ಕೆ ವಾದ್ಯ ಬಾರಿಸಬಾರದು ಎಂಬುದು ಯಾವ ಅರ್ಥ. ರಾಜ್ಯ ಸರ್ಕಾರ ಪಾಕಿಸ್ತಾನ ಮಾಡಲು ಹೊರಟಿದೆಯೇ? ಇದರಲ್ಲಿಯೇ ತಿಳಿಯುತ್ತದೆ ಅದು ಹಿಂದೂ ವಿರೋಧಿ ಪಕ್ಷ ಎಂದು ಆಕ್ರೋಶ ಹೊರಹಾಕಿದರು.