ಕಳಸಾ ಬಂಡೂರಿ, ಮಹದಾಯಿ ಚರ್ಚೆಗೆ ವಿಶೇಷ ಅಧಿವೇಶನದ ಅಗತ್ಯವಿಲ್ಲ: ಎಚ್.ಕೆ.ಪಾಟೀಲ್

ಶುಕ್ರವಾರ, 7 ಅಕ್ಟೋಬರ್ 2016 (16:12 IST)
ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ವಿಷಯದ ಚರ್ಚೆಗೆ ಸದ್ಯ ವಿಶೇಷ ಅಧಿವೇಶನದ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್ ಹೇಳಿದ್ದಾರೆ.
 
ಹುಬ್ಬಳ್ಳಿ ನಗರದ ಕೇಂದ್ರ ರೈಲ್ವೆ ನಿಲ್ದಾಣದ ವಿಐಪಿ ಗೇಟ್ ಬಳಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೂರು ರಾಜ್ಯದ ಮುಖ್ಯಮಂತ್ರಿಗಳ ಮಾತುಕತೆಗೆ ದಿನಾಂಕ ನಿಗದಿಯಾಗಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಹ್ವಾನಿಸಿರುವ ಸಭೆಗೆ ನಾವು ಹೋಗುತ್ತೇವೆ ಎಂದರು.
 
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗತ್ಯ ದಾಖಲೆ ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ. ಸಭೆಯಲ್ಲಿ ಸೌಹಾರ್ದಯುತ ಚರ್ಚೆ ನಡೆಸಲಾಗುತ್ತದೆ. ಸಭೆಯ ನಂತರ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಹೇಳಿದರು. 
 
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಭೂಮಿ ಖರೀದಿ ಪ್ರಕ್ರಿಯೆ ಮುಗಿದಿದೆ. ನೇಮಕಾತಿ ಹಾಗೂ ಕಟ್ಟಡ ಸೇರಿದಂತೆ ಮುಂದಿನ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್ ಮಾಹಿತಿ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ