ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಕೆಲವು ತಿಂಗಳುಗಳಿಂದ ನಡೆಯುತ್ತಿದೆ ಮತ್ತು ಇದು ಪ್ರಪಂಚದಾದ್ಯಂತ ಇಂಧನ ಆಮದಿನ ಮೇಲೆ ಪರಿಣಾಮ ಬೀರಿದೆ. ಈ ನಡುವೆ ರಷ್ಯಾ ಮೇಲೆ ನಿರ್ಬಂಧ ಹೇರಿದ್ದರೂ ಭಾರತ ಅದನ್ನು ಕಡೆಗಣಿಸಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ ಎಂದು ಟೀಕಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹರ್ದೀಪ್ ಸಿಂಗ್ ಪುರಿ ಮಾತನಾಡಿದರು. ಅಷ್ಟೇ ಅಲ್ಲದೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ಬರುತ್ತಿರುವ ಟೀಕೆಗಳನ್ನು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಕೂಡ ತಳ್ಳಿ ಹಾಕಿದ್ದಾರೆ.
ರಷ್ಯಾ ಮೇಲೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಆ ದೇಶದಿಂದ ತೈಲ ಖರೀದಿಸಬೇಡಿ ಎಂದು ಯುರೋಪ್ ಭಾರತಕ್ಕೆ ಸೂಚಿಸಿದೆ ಎನ್ನಲಾಗಿದೆ. ಆದರೆ, ನಿರ್ಬಂಧವಿದ್ದರೂ ಯುರೋಪ್ ರಷ್ಯಾದಿಂದ ಗ್ಯಾಸ್ ಆಮದು ಮಾಡಿಕೊಳ್ಳುವುದು ಸರಿಯೇ? ಎಂದು ಹರ್ದಿಪ್ ಸಿಂಗ್ ಪುರಿ ಪ್ರಶ್ನಿಸಿದರು. ಯುರೋಪ್ ರಷ್ಯಾದಿಂದ ಗ್ಯಾಸ್ ಖರೀದಿಸಿದರೆ ಅದು ಯುದ್ಧಕ್ಕೆ ಧನಸಹಾಯ ಮಾಡಿದಂತೆ ಅಲ್ಲವೇ? ಭಾರತ ತೈಲ ಖರೀದಿಸಿದರೆ ಮಾತ್ರ ರಷ್ಯಾಕ್ಕೆ ಯುದ್ಧಕ್ಕೆ ಹಣ ಕೊಟ್ಟಂತೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.