ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಭೂಮಿ ನೀಡಲು ಮುಂದಾದ ಅನಿವಾಸಿ ಭಾರತೀಯ

ಶನಿವಾರ, 4 ಡಿಸೆಂಬರ್ 2021 (21:00 IST)
ಪಂಜಾಬ್‌ನ ಶಹೀದ್‌ ಭಗತ್‌ಸಿಂಗ್ ನಗರ ಜಿಲ್ಲೆಯಲ್ಲಿರುವ ಅನಿವಾಸಿ ಭಾರತೀಯರೊಬ್ಬರು, ಕರಾಳ ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷಕ್ಕೂ ಅಧಿಕ ಸಮಯದಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ಮಡಿದ ಹುತಾತ್ಮ ರೈತರ ಸ್ಮಾರಕ ಭೂಮಿ ನೀಡಲು ಮುಂದಾಗಿದ್ದಾರೆ.
‘ನರೋವಾ ಪಂಜಾಬ್’ ಎಂಬ ಎನ್‌ಜಿಒ ನಡೆಸುತ್ತಿರುವ ಅಮೆರಿಕಾ ಮೂಲದ ಬರ್ಜಿಂದರ್‌ ಸಿಂಗ್‌ ಹುಸೇನ್‌ಪುರ್‌ ಶುಕ್ರವಾರ ಈ ಕುರಿತು ಮುಖ್ಯಮಂತ್ರಿ ಚರಂಜಿತ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ. ‘ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಮತ್ತು ಎಂಎಸ್‌ಪಿ ಜಾರಿಗಾಗಿ ದೆಹಲಿ ಗಡಿಗಳಲ್ಲಿ ರೈತರು ಮತ್ತು ಕಾರ್ಮಿಕರು ನಡೆಸುತ್ತಿರುವ ಹೋರಾಟ ಅಭೂತಪೂರ್ವವಾಗಿದೆ. ದೇಶದೆಲ್ಲಡೆ ಮಾತ್ರವಲ್ಲದೇ ಪ್ರಪಂಚದಾದ್ಯಂತ ಈ ಹೋರಾಟಕ್ಕೆ ಬೆಂಬಲ ಹರಿದುಬಂದಿದೆ. ಈ ಪ್ರತಿಭಟನೆಯಲ್ಲಿ ಈವರೆಗೆ ಸುಮಾರು 700ಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ಪ್ರಾಣ ತ್ಯಾಗ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
‘ಈ ಐತಿಹಾಸಿಕ, ಮಹಾನ್‌ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಲು, ಅನನ್ಯವಾದ ಹಾಗೂ ವಿಶ್ವ ದರ್ಜೆಯ ಸ್ಮಾರಕವನ್ನು ನಿರ್ಮಿಸುವ ಅಗತ್ಯವಿದೆ ಎಂದಿರುವ ಬರ್ಜಿಂದರ್ ಪತ್ರದಲ್ಲಿ, ’ ಸಿಖ್‌, ಪಂಜಾಬಿ ಮತ್ತು ರೈತರ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸಲು, ನಾನು ಶಹೀದ್‌ ಭಗತ್‌ಸಿಂಗ್‌ ನಗರ ಜಿಲ್ಲೆಯಲ್ಲಿನ ನನ್ನ ಭೂಮಿಯನ್ನು ನೀಡುತ್ತೇನೆ’ ಎಂದು ವಿನಂತಿಸಿಕೊಂಡಿದ್ದಾರೆ.
ನವೆಂಬರ್ 19, ಗುರುನಾನಕ್ ದೇವ್ ಜಯಂತಿಯಂದು ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಅದೇ ದಿನ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ಮೃತಪಟ್ಟ ರೈತರಿಗಾಗಿ ಸ್ಮಾರಕವನ್ನು ನಿರ್ಮಿಸುವುದಾಗಿ ಪಂಜಾಬ್ ಸಿಎಂ ಚನ್ನಿ ಘೋಷಿಸಿದ್ದರು.
ಹುತಾತ್ಮ ರೈತರ ಕುಟುಂಬಕ್ಕೆ ತೆಲಂಗಾಣ ಮತ್ತು ಪಂಜಾಬ್ ಸರ್ಕಾರಗಳು ಪರಿಹಾರ ಘೋಷಿಸಿವೆ. ಆದರೆ ಕೇಂದ್ರ ಸರ್ಕಾರ ಹುತಾತ್ಮ ರೈತರ ಕುರಿತು ತಮಗೆ ಮಾಹಿತಿಯಿಲ್ಲ ಎಂದು ಉಡಾಫೆ ತೋರಿದೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದು 600ಕ್ಕೂ ಹೆಚ್ಚು ರೈತರ ದಾಖಲಾತಿಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ನೀವು ಇದಕ್ಕಾಗಿ ಸಾವಿರಾರು ಕೋಡಿ ರೂ ಖರ್ಚು ಮಾಡಬೇಕಿಲ್ಲ, ಕನಿಷ್ಠ ಒಂದು ಸಂತಾಪ ಸೂಚಿಸಿ ಎಂದು ಪ್ರಧಾನಿಗೆ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ