ಬಿಜೆಪಿಗೂ ಸರ್ಕಾರ ರಚನೆ ಸುಲಭವಲ್ಲ! ಎರಡನೇ ನಾಟಕಕ್ಕೆ ಸಾಕ್ಷಿಯಾಗುತ್ತಾ ಕರ್ನಾಟಕ
ಗುರುವಾರ, 25 ಜುಲೈ 2019 (09:44 IST)
ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಎಂದೇ ಲೆಕ್ಕಾಚಾರ ಹಾಕುತ್ತಿದ್ದರೆ ಅದು ತಪ್ಪಾಗುತ್ತದೆ. ಬಿಜೆಪಿಗೂ ಸರ್ಕಾರ ರಚನೆಯ ಹಾದಿ ಸುಗಮವಾಗಿಲ್ಲ. ಹೀಗಾಗಿ ಕರ್ನಾಟಕ ಮತ್ತೊಂದು ರಾಜಕೀಯ ನಾಟಕಕ್ಕೆ ಸಾಕ್ಷಿಯಾದರೂ ತಪ್ಪಿಲ್ಲ.
ಅತೃಪ್ತ ಶಾಸಕರ ರಾಜೀನಾಮೆ ಇನ್ನೂ ಇತ್ಯರ್ಥವಾಗದಿರುವ ಹಿನ್ನಲೆಯಲ್ಲಿ 225 ಸದನ ಬಲ ಹೊಂದಿರುವ ಕರ್ನಾಟಕದಲ್ಲಿ ಬಹುಮತಕ್ಕೆ 113 ಸ್ಥಾನಗಳು ಬೇಕಾಗಿವೆ. ಬಿಜೆಪಿ ಬಳಿ ಸದ್ಯಕ್ಕೆ 105 ಸ್ಥಾನ ಮಾತ್ರ ಇದೆ.
ಹೀಗಾಗಿ ತರಾತುರಿಯಲ್ಲಿ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರೂ ಈ ಮೊದಲು ನಡೆದಂತೆ ಮತ್ತೆ ಬಹುತಮ ಸಾಬೀತಿಗೆ ಕಷ್ಟವಾಗುತ್ತದೆ. ಒಂದು ವೇಳೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ಬಿಜೆಪಿಗೆ ಬಹುಮತಕ್ಕೆ ಬೇಕಾಗಿರುವ ಶಾಸಕರ ಸಂಖ್ಯಾಬಲವಿರಲಿದೆ.
ಹೀಗಾಗಿಯೇ ಬಿಜೆಪಿ ನಿಯೋಗ ನಿನ್ನೆ ಸ್ಪೀಕರ್ ಭೇಟಿ ಮಾಡಿ ಅತೃಪ್ತರ ರಾಜೀನಾಮೆ ಅಂಗೀಕರಿಸಲು ಕೇಳಿಕೊಂಡಿತ್ತು. ಹೀಗಾಗಿ ಮತ್ತೆ ಚೆಂಡು ಸ್ಪೀಕರ್ ಅಂಗಳಕ್ಕೆ ಬಂದು ನಿಂತಿದೆ. ಇದೇ ಕಾರಣಕ್ಕೇ ಬಿಜೆಪಿ ಈ ಬಾರಿ ಸರ್ಕಾರ ರಚನೆಗೆ ತರಾತುರಿ ಮಾಡುತ್ತಿಲ್ಲ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.