ನುಡಿ 6.0 ಬಿಡುಗಡೆಗೊಳಿಸಿದ ಸಿಎಂ
ಶುಕ್ರವಾರ, 4 ಜನವರಿ 2019 (18:47 IST)
ಗಣಕಯಂತ್ರದಲ್ಲಿ ಕನ್ನಡ ಭಾಷೆ ಬಳಕೆಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವಂತೆ ನುಡಿ ತಂತ್ರಾಂಶವನ್ನು ಅಪ್ಡೇಟ್ ಮಾಡಲಾಗಿದ್ದು, `ನುಡಿ 6.0′ ಆವೃತ್ತಿಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದಾರೆ.
ಕನ್ನಡ ಗಣಕ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರೂಪಿಸಿರುವ ನೂತನ ತಂತ್ರಾಂಶವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು.
ಸದ್ಯ ಚಾಲ್ತಿಯಲ್ಲಿರುವ ನುಡಿ 5.0 ತಂತ್ರಾಂಶದಲ್ಲಿ ಯೂನಿಕೋಡ್ ಜತೆಗೆ ಆಸ್ಕಿ ಪದ್ಧತಿಯಲ್ಲೂ ಅಕ್ಷರಗಳಿವೆ. ಹಾಗಾಗಿ ಹೊಸ ತಂತ್ರಾಂಶವನ್ನು ಸಂಪೂರ್ಣವಾಗಿ ಯೂನಿಕೋಡ್ ಮಾದರಿಯಲ್ಲಿ ರೂಪಿಸಲಾಗಿದೆ. ಪ್ರಮುಖವಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಯೂನಿಕೋಡ್ ಬಳಕೆಯನ್ನೇ ಸಂಪೂರ್ಣವಾಗಿಸುವ ಸಂಕಲ್ಪಕ್ಕನುಗುಣವಾಗಿ ಈ ತಂತ್ರಾಂಶ ಮಾಡಲಾಗಿದೆ ಎಂದರು.
ನುಡಿ ಆಸ್ಕಿ ವ್ಯವಸ್ಥೆಯಲ್ಲಿ 20 ಅಕ್ಷರ ವಿನ್ಯಾಸಗಳನ್ನು (ಫಾಂಟ್) ಯೂನಿಕೋಡ್ನಲ್ಲಿ ರೂಪಿಸಲಾಗಿದೆ. ಇನ್ನಷ್ಟು ಫಾಂಟ್ಗಳನ್ನು ಬದಲಾಯಿಸುವ ಯೋಜನೆಯಿದೆ.
ಸದ್ಯ ನುಡಿ ತಂತ್ರಾಂಶದಲ್ಲಿ ಕೀಲಿಮಣೆ ಮಾಡಿದ ಫೈಲ್ಗಳನ್ನು ಮೈಕ್ರೋಸಾಫ್ಟ್ ವರ್ಡ್ನಂಥ ತಂತ್ರಾಂಶದಲ್ಲಿ ತೆರೆಯಲು ಸಾಧ್ಯವಾಗದಿದ್ದ ಲೋಪ ಸರಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.