ಮರೆವಿನ ಕಾಯಿಲೆಯನ್ನು ಮೊದಲ ಹಂತದಲ್ಲೇ ಆರೈಕೆ ಮಾಡಿದರೆ ನಿಯಂತ್ರಣದಲ್ಲಿ ಇಡಬಹುದು

ಮಂಗಳವಾರ, 21 ಸೆಪ್ಟಂಬರ್ 2021 (20:56 IST)
ಬೆಂಗಳೂರು: ವಯಸ್ಸಾದ ಬಳಿಕ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಅದರಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಮರೆವಿನ ಕಾಯಿಲೆ. ಇಂದು “ವಿಶ್ವ ಅಲ್ಝೈಮರ್ ಡೇ” (ಮರೆವಿನ ಕಾಯಿಲೆ) ವಯಸ್ಸಾದ ಬಳಿಕ ಒಂದೊಂದೇ ವಿಷಯದ ಬಗ್ಗೆ ಜ್ಞಾಪಕ ಶಕ್ತಿ ಕುಂದುತ್ತಾ ಬರುವುದೇ ಅಲ್ಝೈಮರ್ ಎನ್ನುತ್ತೇವೆ. ಈ ಕಾಯಿಲೆ ಪ್ರಾರಂಭದಲ್ಲಿ ಅಷ್ಟಾಗಿ ಸಮಸ್ಯೆ ಎನಿಸದೇ ಹೋದರು, ಆ ನಂತರದಲ್ಲಿ ಇದೇ ದೊಡ್ಡ ಕಾಯಿಲೆಯಾಗಬಹುದು. ಇದನ್ನು ಮೊದಲ ಹಂತದಲ್ಲೇ ಆರೈಕೆ ಮಾಡಿದರೆ, ನಿಯಂತ್ರಣದಲ್ಲಿ  ಇಡಬಹುದು. ಸಾಮಾನ್ಯವಾಗಿ 60 ರಿಂದ 80 ವರ್ಷ ವಯಸ್ಸಿನವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ, ಇದು ಅನುವಂಶಿಯವಾಗಿಯೂ ಬರಬಹುದು ಎಂದು ಖ್ಯಾತ ನರ ವಿಜ್ಞಾನ ತಜ್ಞ  ಡಾ ಎನ್ ನಿತಿನ್ ಕುಮಾರ್ ಈಟಿವಿ ಭಾರತದ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. 
 
ಮರೆವಿನ ಕಾಯಿಲೆಗೆ ಇಂಥದ್ದೇ ಚಿಕಿತ್ಸೆ ಇರುವುದಿಲ್ಲ. ಆದರೆ, ಆರೋಗ್ಯ ಸಮಸ್ಯೆ ಎದುರಾದರೆ ಮಾತ್ರ ಚಿಕಿತ್ಸೆ ನೀಡಬಹುದು. ಮರೆವಿನ ಕಾಯಿಲೆಯ ಕೆಲವು ಹಂತಗಳ ಬಗೆಗೆ ತಿಳಿಸಿದ್ದಾರೆ.  
 
ಮೊದಲ ಹಂತದಲ್ಲಿ ಕಾಡುವ ಸಮಸ್ಯೆ: 
 
ಈ ಹಂತದಲ್ಲಿ ಅಲ್ಝೈಮರ್ ಇರುವ ವ್ಯಕ್ತಿಯಲ್ಲಿ ಯಾವುದೇ ರೀತಿಯ ದೌರ್ಬಲ್ಯ ಕಂಡು ಬರುವುದಿಲ್ಲ. ಸಣ್ಣ ಪುಟ್ಟ ಮರೆವುಗಳು ಮಾತ್ರ ಕಾಣಿಸುತ್ತವೆ. ಇಟ್ಟ ವಸ್ತುಗಳನ್ನು ಮರೆಯುತ್ತಿರುವುದು ಇತ್ಯಾದಿ ಅತಿ ಸಾಮಾನ್ಯವೆನಿಸುತ್ತದೆ ಎನ್ನುತ್ತಾರೆ. 
 
ಎರಡನೇ ಹಂತದಲ್ಲಾಗುವ ಸಮಸ್ಯೆ: ಈ ಹಂತದಲ್ಲಿ ಮರೆವು ಕೊಂಚ ಏರಿಕೆಯಾಗಿರುತ್ತದೆ. ಇಟ್ಟ ವಸ್ತು ಆ ಕ್ಷಣದಲ್ಲೇ ಮರೆಯುವುದು, ಈಗಷ್ಟೇ ತಿಂದ ತಿಂಡಿಯನ್ನೇ ಮರೆಯುವುದು, ಮಾತುಗಳನ್ನು ಮರೆಯುವುದು ಇತ್ಯಾದಿ. ಆದರೆ, ಈ ಹಂತದಲ್ಲಿ, ತಾವು ಮರೆತ ವಿಷಯಗಳನ್ನು ಕೆಲವು ಕ್ಷಣದಲ್ಲಿ ನೆನಪು ಮಾಡಿಕೊಂಡರೆ ಮರುಕಳುಹಿಸುತ್ತಿರುತ್ತದೆ. ಈ ಹಂತದಲ್ಲಿಯೂ ಕೆಲವರು ಹೆಚ್ಚಾಗಿ ಗಮನ ಹರಿಸುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. 
 
ಮೂರನೇ ಹಂತ: ಈ ವೇಳೆ ಮರೆವು ಸ್ವಲ್ಪ ಹೆಚ್ಚಾಗಿಯೇ ಕಾಡುತ್ತದೆ. ಧೈನಂದಿನ ಚಟುವಟಿಕೆಗಳನ್ನೇ ಮರೆಯುವುದು, ಹಣವನ್ನು ಎಣಿಸಲು ಸಾಧ್ಯವಾಗದೇ ಇರುವುದು, ಸರಳ ಸಮಸ್ಯೆಗಳನ್ನು ಪರಿಹರಿಸಲು ಆಗದೇ ಇರುವುದು, ಬಣ್ಣಗಳ ಗುರುತಿಸುವಿಕೆಯಲ್ಲಿ ಕಷ್ಟ, ಮಾತುಗಳನ್ನೇ ಮರೆಯುವುದು ಇತ್ಯಾದಿ ಸಮಸ್ಯೆಗಳು ಉಲ್ಭಣಗೊಳ್ಳುತ್ತಾ ಹೋಗುತ್ತವೆ ಎಂದು ಮಾಹಿತಿ ನೀಡುತ್ತಾರೆ.  
 
ಮಧ್ಯಮ ಹಂತ  ಈ ಹಂತದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಡ ತೊಡಗುತ್ತದೆ. ಸಂಬಂಧಗಳನ್ನು ಮರೆಯುವುದು, ವ್ಯಕ್ತಿಗಳನ್ನು ಗುರುತಿಸಲು ಆಗದೇ ಇರುವುದು, ತೀವ್ರ ಕೋಪ, ಆತಂಕ, ಒತ್ತಡ, ಚಡಪಡಿಕೆ ಇತ್ಯಾದಿ ಸಮಸ್ಯೆಗಳು ಉಲ್ಭಣವಾಗುತ್ತದೆ. ಈ ಹಂತದಲ್ಲಿಯೇ ವೈದ್ಯರನ್ನು ಕಾಣುವುದು ಹೆಚ್ಚು ಉತ್ತಮ ಎಂದು ಹೇಳುತ್ತಾರೆ.
 
ಕೊನೆಯ ಹಂತ: ಮರೆವು ಕೊನೆಯ ಹಂತಕ್ಕೆ ತಲುಪಿದಾಗ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡ ಬಹುದು. ದೈಹಿಕ ಚಟುವಟಿಕೆಗಳ ಮೇಲೆ ನಿಯಂತ್ರಣವಿಲ್ಲದೇ ಇರುವುದು, ಮಾತನಾಡುವುದನ್ನೇ ಮರೆಯುವುದು, ಖಿನ್ನತೆ,  ಕರುಳು ಸಂಬಂಧ ಕಾಯಿಲೆ, ತೂಕ ಇಳಿಯುವುದು, ಆಹಾರ ಸೇವನೆಯಲ್ಲಿ ಕಷ್ಟ, ನರಳುವಿಕೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಾರೆ, 
ಇದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾದ್ದರಿಂದ ವೈದ್ಯರನ್ನು ಕಾಣುವುದರಿಂದ ಚಿಕಿತ್ಸೆ ಮೂಲಕ ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಬಹುದು, ಆದರೆ ಮರೆವನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು. ಇದನ್ನು ಆಪ್ತಸಮಾಲೋಚಕರನ್ನು ಭೇಟಿ ಮಾಡಿ, ಈ ಸಮಸ್ಯೆಯಿಂದಾಗುತ್ತಿರುವ ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳುವ ಬಗ್ಗೆ ಸಲಹೆ ಪಡೆಯಬಹುದು ಎನ್ನುತ್ತಾರೆ
docter

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ