ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 17 ಇಲಾಖೆಗಳ ಪೈಕಿ, ಅತಿಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ನಡೆಯುವಂತಹ ಮತ್ತು ಅತಿಹೆಚ್ಚು ಅಕ್ರಮ ಗಳಿಕೆಗೆ ಅವಕಾಶವಿರುವಂತಹ ಪ್ರಮುಖ 04 ಇಲಾಖೆಗಳಾದ ನಗರ ಯೋಜನೆ, ರಸ್ತೆಗಳ ಮೂಲಭೂತ ಸೌಕರ್ಯ, ಬೃಹತ್ ನೀರುಗಾಲುವೆ ಮತ್ತು ಯೋಜನೆ (ಕೇಂದ್ರ) ಇಲಾಖೆಗಳಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಹುದ್ದೆಗಳಿಗಿಂತಲೂ ಸುಮಾರು 136 ಮಂದಿ ಅಧಿಕಾರಿಗಳು ಅಧಿಕವಾಗಿ ನಿಯೋಜನೆಗೊಂಡಿದ್ದಾರೆ.
"ವೃಂದ ಮತ್ತು ನೇಮಕಾತಿ ನಿಯಮ" ಗಳಂತೆ ಬಿಬಿಎಂಪಿ ಗೆ ಎರವಲು ಸೇವೆ ಹೆಸರಿನಲ್ಲಿ ಕೇವಲ PWD ಇಲಾಖೆಯ ಅಧಿಕಾರಿಗಳನ್ನು ಮಾತ್ರವೇ ನಿಯೋಜನೆ ಮಾಡಬೇಕೆಂಬ ನಿಯಮಗಳಿದ್ದರೂ ಸಹ HUDCO, KPTCL, KRIDL, KSFC, DMA, ಕೃಷಿ ಮತ್ತು ನೀರಾವರಿ ಇಲಾಖೆಗಳಿಂದಲೂ ಸಹ ಅಧಿಕಾರಿಗಳನ್ನು ನಿಯಮಬಾಹಿರವಾಗಿ ನಿಯೋಜನೆ ಮಾಡಲಾಗಿದೆ.
ಈ ರೀತಿ, ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ, ನಿಯಮಬಾಹಿರವಾಗಿ ಪಾಲಿಕೆಗೆ ನಿಯೋಜನೆಗೊಂಡಿರುವ ಮತ್ತು ಪ್ರಮುಖ 04 ಇಲಾಖೆಗಳಲ್ಲಿ ಅವಶ್ಯಕತೆಗಿಂತಲೂ ಅಧಿಕವಾಗಿ ನಿಯೋಜನೆಗೊಂಡಿರುವ 136 ಮಂದಿ ಅನವಶ್ಯಕ ಅಧಿಕಾರಿಗಳನ್ನು ಕೂಡಲೇ ವಾಪಸ್ಸು ಕಳುಹಿಸುವ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು, ಪಾಲಿಕೆಯ ಮುಖ್ಯ ಆಯುಕ್ತರನ್ನು ಮತ್ತು ಆಡಳಿತಾಧಿಕಾರಿಗಳನ್ನು ಆಗ್ರಹಿಸಿ ದೂರುಗಳನ್ನು ಸಲ್ಲಿಸಲಾಗಿದೆ.