ಬೆಂಗಳೂರು: ಜೆಡಿಎಸ್‌ಗೆ ಸ್ವತಂತ್ರವಾಗಿ 5 ವರ್ಷ ಸಂಪೂರ್ಣ ಅವಧಿಯ ಅಧಿಕಾರವನ್ನು ಒಂದು ಸಲ ಕೊಟ್ಟು ನೋಡಿ, ಪಂಚರತ್ನ ಯೋಜನೆಗಳ ಮೂಲಕ ರಾಜ್ಯದ ಚಿತ್ರಣವನ್ನೇ ಬದಲಿಸಿ ತೋರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ ಎರಡನೇ ಹಂತದ ಜಿಕೆಡಬ್ಲುಯು ಮೈದಾನದಲ್ಲಿ ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಂಚರತ್ನ ಯೋಜನೆಯಲ್ಲಿ ಖಾಸಗಿ ಶಾಲೆಗಳಿಗೆ ಮಿಗಿಲಾದ ಶಾಲೆಗಳನ್ನು ಆರಂಭಿಸಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ಚಿಕಿತ್ಸೆ, ಪ್ರತಿಭಾವಂತರ ಮನೆ ಬಾಗಿಲಿಗೆ ಉದ್ಯೋಗ, ಮಹಿಳೆಯರ ಸಬಲೀಕರಣ, ತಲೆಗೊಂದು ಸೂರು, ಸಮಗ್ರ ನೀರಾವರಿಗೆ ಜಲಧಾರೆ ಯೋಜನೆ ತರುವುದು ನಮ್ಮ ಕನಸಾಗಿದೆ ಎಂದು ವಿವರಿಸಿದರು.
ಕೆರೆಗಳನ್ನು ಉತ್ತಮಪಡಿಸಿ ಅವುಗಳಿಗೆ ನದಿ ನೀರು ತುಂಬಿಸುವ ಕೆಲಸ ಮಾಡಲಾಗುವುದು. ಎಚ್.ಡಿ.ದೇವೇಗೌಡರ ಅಧಿಕಾರದಲ್ಲಿ ಇದ್ದಾಗ ರಾಜ್ಯಕ್ಕೆ ಅನೇಕ ನೀರಾವರಿ ಯೋಜನೆ ಕೊಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ದೇವೇಗೌಡರು ಮಾಡಿದ ಒಂದು ಆದೇಶದಿಂದ ನಗರಕ್ಕೆ ಕಾವೇರಿ ನದಿಯಿಂದ 9 ಟಿಎಂಸಿ ನೀರು ಸಿಕ್ಕಿದೆ. ಇಂದು ನಗರದ ಜನ ಕಾವೇರಿ ನೀರು ಕುಡಿಯುತ್ತಿದ್ದರೆ, ಅದಕ್ಕೆ ಕಾರಣ ದೇವೇಗೌಡರು ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗೆ ಅಡಿಗಲ್ಲು ಹಾಕಿ ಮೊದಲ ಹಂತಕ್ಕೆ ಚಾಲನೆ ನೀಡಿದ್ದೆ. ನಗರದ ಐಟಿ ಕ್ರಾಂತಿಗೆ ಮುನ್ನುಡಿ ಬರೆದವರು ದೇವೇಗೌಡರು. ನಗರಕ್ಕೆ ಐಟಿ ಪಾರ್ಕ್ ಬರಲು ಕೂಡ ಅವರೇ ಕಾರಣ. ವರ್ತುಲ ರಸ್ತೆ ಇತ್ಯಾದಿ ಮೂಲಸೌಕರ್ಯವನ್ನು ಕಲ್ಪಿಸಿದವರು ದೇವೇಗೌಡರು. ಇದನ್ನು ಬೆಂಗಳೂರಿನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.