ಓಮಿಕ್ರಾನ್ ಭೀತಿ: ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಕೊರತೆ!

ಸೋಮವಾರ, 20 ಡಿಸೆಂಬರ್ 2021 (08:24 IST)
ಬೆಂಗಳೂರು : ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ರೂಪಾಂತರಿ ವೈರಾಣು ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿನ ರಕ್ತನಿಧಿಗಳಲ್ಲಿ ರಕ್ತದಾನ ಮಾಡಲು ಬರುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.

ಕಳೆದ ಎರಡು ತಿಂಗಳಿಂದ ರಕ್ತದಾನ ಮಾಡುವವರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿತ್ತು. ಆದರೆ ಕೋವಿಡ್ - 19 ರೂಪಾಂತರಿ ವೈರಾಣು ಓಮ್ರಿಕಾನ್ ಪತ್ತೆಯಾದ ನಂತರ ರಕ್ತದಾನ ಮಾಡಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ.

ಕೆಲವೇ ಮಂದಿ ಮಾತ್ರ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡುತ್ತಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ, ರೋಟರಿ ಟಿಟಿಕೆ ಬ್ಲಡ್ ಬ್ಯಾಂಕ್, ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಇತರೆ ರಕ್ತ ನಿಧಿಗಳಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಕಂಡು ಬಂದಿದೆ.

ಸದ್ಯ ಪ್ರತಿ ದಿನ ಸರಾಸರಿ 10 ಯೂನಿಟ್ ರಕ್ತ ಮಾತ್ರ ಸಂಗ್ರಹವಾಗುತ್ತಿದೆ. ಬೇಡಿಕೆ ಪ್ರಮಾಣಕ್ಕೆ ಹೋಲಿಸಿದರೆ ಇದು ಸಾಕಾಗುವುದಿಲ್ಲ. 'ನಿಯಮಿತವಾಗಿ ರಕ್ತ ದಾನ ಮಾಡುವವರು ಮಾತ್ರ ರಕ್ತದಾನ ಶಿಬಿರಕ್ಕೆ ಬರುತ್ತಿದ್ದಾರೆ. ಆದರೆ ಹೊಸಬರು ಹಿಂಜರಿಯುತ್ತಿದ್ದಾರೆ. ರಕ್ತದಾನ ಶಿಬಿರಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ.

ಆದರೆ ರಕ್ತದ ಅವಶ್ಯಕತೆ ಬಹಳಷ್ಟು ಇದೆ. ಓಮಿಕ್ರಾನ್ನ ಪರಿಣಾಮ ಅಷ್ಟೊಂದು ತೀವ್ರವಾಗಿಲ್ಲ ಎಂದು ವರದಿಗಳು ಹೇಳುತ್ತಿದ್ದರೂ, ಅದರ ಬಗ್ಗೆ ಜನರಲ್ಲಿರುವ ಭಯ ಅವರನ್ನು ಶಿಬಿರಗಳಿಗೆ ಬಾರದಂತೆ ಮಾಡುತ್ತಿದೆ' ಎಂದು ಲಯನ್ಸ್ ಬ್ಲಡ್ ಲೈನ್ ಸಂಸ್ಥೆಯ ಅಲ್ಫೋನ್ಸ್ ಕುರಿಯನ್ ಹೇಳಿದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ