ಪ್ರಧಾನಿ ಸೂಚನೆ ಮೇರೆಗೆ ಮೂರು ರಾಜ್ಯಗಳ ಸಿಎಂ ಸಭೆ: ಖರ್ಗೆಗೆ ಯಡಿಯೂರಪ್ಪ ತಿರುಗೇಟು
ಗುರುವಾರ, 13 ಅಕ್ಟೋಬರ್ 2016 (15:03 IST)
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಯುತ್ತಿರುವುದು. ಇದನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿದುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು.
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಂದ ಸಂಧಾನ ಸಭೆ ನಡೆಸುವ ಬದಲು ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಯಲಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 21 ರಂದು ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಮುಂಬೈ ನಗರದಲ್ಲಿ ನಿಗದಿಯಾಗಿದೆ. ಈ ಮಹತ್ವದ ಸಭೆಗೆ ಗೋವಾ ಹಾಗೂ ಮಹಾರಾಷ್ಟ್ರದ ವಿಪಕ್ಷ ನಾಯಕರು ಬರಬೇಕು. ಸಭೆಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಲಿ ಎಂದು ಆಗ್ರಹಿಸಿದರು.
ಶ್ರೀನಿವಾಸ್ ಪ್ರಸಾದ್‌ರತ್ತ ಬಿಎಸ್‌ವೈ ಚಿತ್ತ.....
ಅಕ್ಟೋಬರ್ 27 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಓರ್ವ ಮತ್ಸದ್ಧಿ ರಾಜಕಾರಣಿ. ಬಿಜೆಪಿ ಪಕ್ಷಕ್ಕೆ ಬರುವಂತೆ ಅವರಲ್ಲಿ ಎರಡು ಬಾರಿ ಮನವಿ ಮಾಡಿದ್ದೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಮತ್ತೊಮ್ಮೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ರಾಜ್ಯ ಸರಕಾರ ದಿವಾಳಿಯಾಗಿದ್ಯಾ?
ಹಾಲು ಉತ್ಪಾದಕರಿಗೆ ನೀಡಬೇಕಾದ ಬಾಕಿ ಹಣವನ್ನು ನೀಡಿಲ್ಲ. ಬಡವರ ಮನೆಯಲ್ಲಿ ಸಾವು ಸಂಭವಿಸಿದರೆ 5 ಸಾವಿರ ಪರಿಹಾರ ಹಣ ನೀಡುವುದಾಗಿ ರಾಜ್ಯ ಸರಕಾರ ಭರವಸೆ ನೀಡಿತ್ತು. ಆದರೆ, ಈ ಹಣವನ್ನು ನೀಡಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದಿವಾಳಿಯಾಗಿದ್ಯಾ ಎಂದು ಪ್ರಶ್ನಿಸಿದರು. ಈ ಕುರಿತು ಸರಕಾರದ ಗಮನ ಸೆಳೆಯಲು ಅಕ್ಟೋಬರ್ 14 ರಂದು ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬ್ರೀಡ್ಜ್ ನಿರ್ಮಾಣದ ಹೆಸರಿನಲ್ಲಿ ಹಗಲು ದರೋಡೆ.........
ರಾಜಧಾನಿಯಲ್ಲಿ ನಿರ್ಮಾಣವಾಗುತ್ತಿರುವ ಸ್ಟೀಲ್ ಬ್ರೀಡ್ಜ್ ಹೆಸರಿನಲ್ಲಿ ರಾಜ್ಯ ಸರಕಾರ ಹಗಲು ದರೋಡೆ ಮಾಡುತ್ತಿದೆ. 1800 ಕೋಟಿ ರೂಪಾಯಿಗಳಲ್ಲಿ ಸ್ಟೀಲ್ ಬ್ರೀಡ್ಜ್ ನಿರ್ಮಾಣ ಮಾಡುವುದಾಗಿ ರಾಜ್ಯ ಸರಕಾರ ತಿಳಿಸಿದೆ. ಆದರೆ, ಇದರಲ್ಲಿ 40 ಪ್ರತಿಶತ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಈ ಕೂಡಲೇ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ