ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ರೈತರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಇದು ತುಘಲಕ್ ಸರಕಾರ, ರೈತ ವಿರೋಧಿ ಸರಕಾರ, ಇಂತಹ ಸರಕಾರವನ್ನು ಹಿಂದೆಂದೂ ನೋಡಿಲ್ಲ ಎಂದು ಕಿಡಿಕಾರಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ರೈತರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಬಂಧಿಸಿಲ್ಲ. ಜೈಲಿಗೆ ಹಾಕಿಲ್ಲ. ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.