ಥಾಣೆ: ಮುಟ್ಟಾಗಿದೆಯಾ ಎಂದು ಬಾಲಕಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್
ಥಾಣೆಯ ಶಹಾಪುರ್ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ವಾಷ್ ರೂಂನಲ್ಲಿ ರಕ್ತದ ಕಲೆಯಿದ್ದಿದ್ದನ್ನು ಸಹಾಯಕ ಸಿಬ್ಬಂದಿಗಳು ಗಮನಿಸಿದ್ದರು. ಹೀಗಾಗಿ ಯಾವ ಬಾಲಕಿಗೆ ಪಿರಿಯಡ್ಸ್ ಬಂದಿದೆ ಎಂದು ಸಿಬ್ಬಂದಿ ಈ ರೀತಿ ಅಮಾನವೀಯವಾಗಿ ಪರೀಕ್ಷೆ ನಡೆಸಿದ್ದಾರೆ.
5 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಸೆಮಿನಾರ್ ಹಾಲ್ ಗೆ ಕರೆದೊಯ್ದು ಸ್ಕ್ರೀನ್ ಮೇಲೆ ರಕ್ತದ ಕಲೆಗಳ ಫೋಟೋ ತೋರಿಸಿದ್ದಾರೆ. ಬಳಿಕ ಯಾವ ವಿದ್ಯಾರ್ಥಿನಿಗೆ ಪಿರಿಯಡ್ಸ್ ಬಂದಿದೆ ಎಂದು ಬಟ್ಟೆ ಬಿಚ್ಚಿಸಿ ಚೆಕ್ ಮಾಡಿಸಿದ್ದಾರೆ. ಮುಟ್ಟಾಗಿರುವ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಗುಂಪು ಮಾಡಿ ನಿಲ್ಲಿಸಿದ್ದಾರೆ. ಇತರೆ ವಿದ್ಯಾರ್ಥಿಗಳ ಎದುರೇ ಬಟ್ಟೆ ಬಿಚ್ಚಿಸಿ ಪರೀಕ್ಷೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.
ಘಟನೆ ಬಗ್ಗೆ ವಿದ್ಯಾರ್ಥಿನಿಯರು ಮನೆಯಲ್ಲಿ ಹೇಳಿದ್ದಾರೆ. ಬಳಿಕ ಪೋಷಕರು ಶಾಲೆಗೆ ಹೋಗಿ ಪ್ರಶ್ನಿಸಿದ್ದಲ್ಲದೆ ಪೊಲೀಸರಿಗೂ ದೂರು ನೀಡಿದ್ದಾರೆ. ಇದೀಗ ಪೊಲೀಸರು ಮಕ್ಕಳ ಮೇಲಿನ ದೌರ್ಜನ್ಯ ಕೇಸ್ ದಾಖಲಿಸಿ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.