ಆರ್ಕೆಸ್ಟ್ರಾ ಕಲಾವಿದೆಯರನ್ನ ವೇಶ್ಯಾವಾಟಿಕೆಗೆ ಬರುವಂತೆ ಹಣದ ಆಮಿಷವೊಡ್ಡಿದ ಆರೋಪ ಆರ್ಕೆಸ್ಟ್ರಾ ಮಾಲೀಕ ವಿರದ್ಧವೇ ಕೇಳಿಬಂದಿದೆ. ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ. ಏನೂ ತೊಂದರೆ ಆಗಲ್ಲ, ನಾನೂ ಜತೆಯಲ್ಲೇ ಇರ್ತೀನಿ… ಎಂದು ಮಹಿಳಾ ಕಲಾವಿದೆಯೊಬ್ಬರ ಜತೆ ಸಂಭಾಷಣೆ ನಡೆಸಿದ ಆಡಿಯೋ ವೈರಲ್ ಆಗಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿದ ಆರ್ಕೇಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಆರ್.ರಂಗರಾಜು, ಕೆಲವರು ಕಲೆಯ ಹೆಸರಿನಲ್ಲಿ ಮೋಸ ಮಾಡಲು ಹೊರಟಿರುವುದು ತುಮಕೂರು ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ಜಿಲ್ಲೆಯಲ್ಲಿ 90 ಆರ್ಕೇಸ್ಟ್ರಾ ತಂಡಗಳಿಗೆ ಸೇರಿದ ಗಾಯಕರು, ಹಿನ್ನೆಲೆ ಸಂಗೀತಗಾರರು, ನೃತ್ಯಗಾರರು ಕಷ್ಟ ಅನುಭವಿಸುವಂತಾಗಿದೆ. ಅತಿ ಸಂಕಷ್ಟದಲ್ಲಿರುವ ಮಹಿಳಾ ಕಲಾವಿದರನ್ನು ಕೆಲವರು ಕಾರ್ಯಕ್ರಮ ಕೊಡಿಸುವ, ಹೆಚ್ಚಿನ ದುಡ್ಡು ಕೊಡಿಸುವ ಆಸೆ ತೋರಿಸಿ ಆಯೋಜಕರೊಂದಿಗೆ ಸಹಕರಿಸುವಂತೆ ಒತ್ತಾಯಿಸಿರುವ ಮೊಬೈಲ್ ಸಂಭಾಷಣೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲ್ಪತರು ನಾಡು ತುಮಕೂರು ಆರ್ಕೇಸ್ಟ್ರಾ ಮಾಲೀಕರು ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಕೆ.ನಾಗರಾಜು, ಮಧುಸೂದನ್, ಅಖಿಲೇಶ್, ಶಿವಣ್ಣ, ಮಂಜು, ಕವಿರಾಜು ಇದ್ದರು.