ಯಡಿಯೂರಪ್ಪ ವಿರುದ್ಧ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿಲ್ಲ: ಉಗ್ರಪ್ಪ

ಸೋಮವಾರ, 21 ಆಗಸ್ಟ್ 2017 (17:42 IST)
ಶಿವರಾಂ ಕಾರಂತ ಬಡಾವಣೆ ಭೂಸ್ವಾಧೀನ ಡಿನೋಟಿಫಿಕೇಶನ್ ಕುರಿತಂತೆ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರೇ ತನಿಖೆಗೆ ಆದೇಶಿಸಿದ್ದರು ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಸಿಎಂ ಡಿ.ವಿ.ಸದಾನಂದಗೌಡ ಡಿನೋಟಿಫಿಕೇಶನ್ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿ ಒಪ್ಪಿಸಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
 
ಮಾಜಿ ಸಿಎಂ ಸದಾನಂದಗೌಡರು ಸಿಐಡಿ ತನಿಖೆಗೆ ಆದೇಶಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಸರಕಾರದ ಪಾತ್ರವಿಲ್ಲ. ಅನಗತ್ಯವಾಗಿ ಸರಕಾರದ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಗುಡುಗಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಖಾಸಗಿ ದೂರು ದಾಖಲಾಗಿದೆ. ದೂರಿನನ್ವಯ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಎಸಿಬಿ ಅದಿಕಾರಿಗಳು ವಿಚಾರಣೆಗಾಗಿ ಯಡಿಯೂರಪ್ಪ ಅವರಿಗೆ ಸಮನ್ಸ್ ನೀಡಿದ್ದಾರೆ. 
 
ಸರಕಾರಕ್ಕೆ ದ್ವೇಷ ರಾಜಕಾರಣ ಮಾಡುವ ಸಂಸ್ಕ್ರತಿಯಿಲ್ಲ. ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೇ ಯಡಿಯೂರಪ್ಪ ವಿರುದ್ಧ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ