ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಮೀಸಲಾತಿ: ಹೈಕೋರ್ಟ್ ತಡೆಯಾಜ್ಞೆ
ಗುರುವಾರ, 13 ಸೆಪ್ಟಂಬರ್ 2018 (16:16 IST)
ಕೊಟ್ಟೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಧಾರವಾಡದ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣ ಪಂಚಾಯತ್ ನ 20 ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಬಿ.ರೇಖಾ ರಮೇಶ್ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೊಟ್ಟೂರು ಪಟ್ಟಣ ಪಂಚಾಯತ್ ಗೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ.ಗೆ ಮೀಸಲಾತಿ ಪ್ರಕಟಗೊಂಡಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಹಿಂ.ವ.ಎ ಗೆ ಮೀಸಲಾಗಿತ್ತು. ಮೀಸಲಾತಿ ಪ್ರಶ್ನಿಸಿ ಹೈ ಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ ನಂತರ, ಅರ್ಜಿ ವಿಚಾರಣೆ ಮಾಡಿದ ಧಾರವಾಡ ಹೈ ಕೋರ್ಟ್ ಪೀಠ, ಸದ್ಯ ತಡೆಯಾಜ್ಞೆ ನೀಡಿದೆ.
ಹಾಗಾಗಿ ಸೆ.20 ರಂದು ನಡೆಯಬೇಕಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ರದ್ದಾಗುವ ಸಾಧ್ಯತೆ ಇದೆ. ಆ.31 ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಸೆ.03 ರಂದು ಹೊರಬಿದ್ದಿತ್ತು. 20 ವಾರ್ಡ್ ಗಳನ್ನು ಹೊಂದಿರುವ ಕೊಟ್ಟೂರು ಪಟ್ಟಣ ಪಂಚಾಯತ್ ಅತಂತ್ರ ಫಲಿತಾಂಶ ಕಂಡಿತ್ತು. ಇಲ್ಲಿ ಪಕ್ಷೇತರರೇ ನಿರ್ಣಾಯಕರು.