ಗಗನಕ್ಕೇರಿದ ಕಟ್ಟಡ ನಿರ್ಮಾಣ ವೆಚ್ಚಕ್ಕೆ ಕುಸಿದ ಮಾಲೀಕರು

ಗುರುವಾರ, 24 ಮಾರ್ಚ್ 2022 (20:08 IST)
ಹೋಮ್​ ಲೋನ್  (Home Loan) ಪಡೆದು, ಮನೆ ಕಟ್ಟಿಸುತ್ತಿರುವವರಿಗೆ ಈಗ ಹೊಸ ತಲೆನೋವು ಎದುರಾಗಿದೆ. ಸ್ವತಃ ತಾವೇ ನಿಂತು ಮನೆ ನಿರ್ಮಿಸುತ್ತಿದ್ದರೂ ಅಥವಾ ಕಾಂಟ್ರಾಕ್ಟ್ ಅಂತ ವಹಿಸಿದ್ದರೂ ಯಾರೂ ಇದರಿಂದ ಹೊರತಾಗಿಲ್ಲ. ಅಷ್ಟಕ್ಕೂ ಸಮಸ್ಯೆ ಏನು ಅಂತೀರಾ? ಈಗ ರಷ್ಯಾ- ಉಕ್ರೇನ್ ಯುದ್ಧ ನಡೆಯುತ್ತಿದೆಯಲ್ಲಾ, ಇದರಿಂದ ಎಲ್ಲ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗಿದೆ. ಉಕ್ಕು, ಸಿಮೆಂಟ್​ನಂಥ ಮನೆಗೆ ಬಳಸುವ ವಸ್ತುಗಳಂತೂ ಕೇಳಲೇಬೇಡಿ. ಇದರ ಜತೆಗೆ ಈಗ ಡೀಸೆಲ್- ಪೆಟ್ರೋಲ್ ದರ ಕೂಡ ಜಾಸ್ತಿ ಆಗಲು ಆರಂಭವಾಗಿದ್ದು, ಸರಕು ಸಾಗಣೆಗೆ ಹೆಚ್ಚಿನ ವೆಚ್ಚದಿಂದ ಎಲ್ಲವೂ ಮತ್ತೂ ದುಬಾರಿ ಆಗುವ ಮುನ್ಸೂಚನೆ ಕೊಡುತ್ತಿದೆ. ಈ ಕಾರಣಕ್ಕೆ ದುಗುಡ ಜಾಸ್ತಿ ಆಗಿದೆ. ಒಂದು ಅಂದಾಜಿನಲ್ಲಿ ಮನೆಯನ್ನು ಇಷ್ಟರಲ್ಲೇ ಕಟ್ಟಿ ಮುಗಿಸಬೇಕು ಎಂದು ಬ್ಯಾಂಕ್​ನಲ್ಲಿ ಸಾಲ ಮಾಡಲಾಗಿರುತ್ತದೆ. ಈಗ ಮುಕ್ತಾಯದ ಹಂತದಲ್ಲಿ ಹಣವೇ ಸಾಲುತ್ತಿಲ್ಲ. ಈಗ ಪಡೆದಿರುವ ಸಾಲಕ್ಕೆ ಟಾಪ್​ ಅಪ್​ ಮಾಡಿಸುವುದಕ್ಕೆ ಬ್ಯಾಂಕ್​ಗಳಲ್ಲಿನ ನಿಯಮಾವಳಿಗಳು ಅವಕಾಶ ನೀಡುತ್ತಿಲ್ಲ.
 
ಇಲ್ಲೊಂದು ಅಂಥದ್ದೇ ಉದಾಹರಣೆ ಇದೆ. ಅವರ ಹೆಸರು ಸಿರಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 50 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅವರ ಆಸ್ತಿ ಮೌಲ್ಯ, ಬರುತ್ತಿರುವ ಸಂಬಳ ಹೆಚ್ಚಾಗಿದ್ದರೂ ಅವರು ಅಪ್ಲೈ ಮಾಡಿದ್ದು 50 ಲಕ್ಷಕ್ಕೆ ಮಾತ್ರ. ಆದರೆ ಈಗ 45 ಲಕ್ಷ ವಿತರಣೆ ಆಗಿದೆ. ಇನ್ನೇನಿದ್ದರೂ 5 ಲಕ್ಷ ಮಾತ್ರ ಬಿಡುಗಡೆ ಆಗಬೇಕು. ಮನೆ ಪೂರ್ಣವಾಗಿದೆ ಎಂದು “ಕಂಪ್ಲೀಷನ್ ಸರ್ಟಿಫಿಕೇಟ್” ಬ್ಯಾಂಕ್​ಗೆ ಸಲ್ಲಿಸದ ಹೊರತು ಆ 5 ಲಕ್ಷ ಬಿಡುಗಡೆ ಆಗಲ್ಲ. ಆದರೆ ಮನೆ ಪೂರ್ಣಗೊಳ್ಳುವುದಕ್ಕೆ ಇನ್ನೂ 18 ಲಕ್ಷ ಬೇಕಿದೆ. ಸಿರಿ ಅವರ ಅಂದಾಜು ವೆಚ್ಚವನ್ನು ಜಾಸ್ತಿ ಮಾಡಿದ್ದು ದಿಢೀರನೆ ಏರಿಕೆ ಕಂಡ ಉಕ್ಕು, ಸಿಮೆಂಟ್ ಹಾಗೂ ವಿವಿಧ ಕೂಲಿ ದರಗಳು. ಇದರ ಜತೆಗೆ ಸರ್ಕಾರದ ವಿವಿಧ ಇಲಾಖೆಗಳಿಂದಲೂ ಶುಲ್ಕಗಳನ್ನು ಭಾರೀ ಏರಿಕೆ ಮಾಡಲಾಗಿದೆ. ಹೇಗೋ 50 ಲಕ್ಷದೊಳಗೆ ಮನೆ ಪೂರ್ತಿ ಆಗುತ್ತದೆ ಎಂಬ ಆಲೋಚನೆಯಲ್ಲಿದ್ದ ಸಿರಿಯವರಿಗೆ ಈಗ ಹೆಚ್ಚುವರಿಯಾಗಿ 13 ಲಕ್ಷ ರೂಪಾಯಿ ಹಣ ಬೇಕು. ಅದಕ್ಕಾಗಿ ಟಾಪ್​ ಅಪ್​ ಮಾಡಿಸಿಕೊಳ್ಳೋಣ ಅಂತ ವಿಚಾರಿಸಿದರೆ, 12 ಇಎಂಐಗಳನ್ನು ಪೂರ್ತಿ ಕಟ್ಟಿ ಪೂರೈಸಿದ್ದಲ್ಲಿ ಮಾತ್ರ ಟಾಪ್​ ಅಪ್​ಗೆ ಅರ್ಜಿ ಹಾಕಬಹುದು ಎನ್ನುತ್ತಾರೆ ಬ್ಯಾಂಕ್ ಮ್ಯಾನೇಜರ್.
ಆದರೆ, ಅದಕ್ಕೂ ಐಟಿಆರ್​, ಪೂರಕ ಲೀಗಲ್ ಒಪಿನಿಯನ್, ಪೇ ಸ್ಲಿಪ್ ಇವೆಲ್ಲವನ್ನೂ ಸಲ್ಲಿಸಿ, ಮೊದಲಿಂದ ಅಪ್ಲೈ ಮಾಡಬೇಕು. ತಕ್ಷಣವೇ ಹಣ ಬೇಕು ಅಂತಾದಲ್ಲಿ ಒಟ್ಟು ಸಾಲದ ಶೇ 10ರಷ್ಟನ್ನು ಮಾತ್ರ ನೀಡಬಹುದು ಎಂಬುದು ಅವರ ಮಾತು. ಆದರೆ ಶೇ 10ರಷ್ಟು ಮಾತ್ರ ಅಂತಾದಲ್ಲಿ ಆ ಮೊತ್ತ ಯಾವುದಕ್ಕೂ ಸಾಲುವುದಿಲ್ಲ. 12 ಇಎಂಐ ಪೂರ್ತಿ ಆಗುವ ತನಕ ಕೈ ಸಾಲ ತರಬೇಕು. ಅದು ಹದಿಮೂರು ಲಕ್ಷ ರೂಪಾಯಿಗೆ. ಇಷ್ಟು ದೊಡ್ಡ ಮೊತ್ತ ಹೇಗೆ ತರುವುದು ಎಂಬುದು ಸಿರಿ ಅವರಿಗೆ ನಿತ್ಯದ ತಲೆನೋವಾಗಿ ಪರಿಣಮಿಸಿದೆ.
 
ಇನ್ನು ಬನಶಂಕರಿಯಲ್ಲಿ ಮಟೀರಿಯಲ್ ಕಾಂಟ್ರಾಕ್ಟ್ ನೀಡಿರುವ ಗಂಗಣ್ಣ ಅವರದು ಇದೇ ರೀತಿಯ ಮತ್ತೊಂದು ಕಥೆ. ಅವರು 2021ರ ಮಾರ್ಚ್​ನಲ್ಲಿ ಕಟ್ಟಡ ನಿರ್ಮಾಣ ಆರಂಭ ಮಾಡಿದ್ದು. ಮಟೀರಿಯಲ್ ಕಾಂಟ್ರಾಕ್ಟ್ ಅಂತ ಅವರು ನೀಡಿದ್ದು ಚದರಕ್ಕೆ 1,80,000. ಆದರೆ ಈ ಮೊತ್ತ 2 ಲಕ್ಷ ದಾಟಬಹುದು ಎಂಬುದು ಕಾಂಟ್ರಾಕ್ಟರ್ ಹೇಳಿದ್ದಾರೆ ಎನ್ನುತ್ತಾರೆ. ಅಷ್ಟೇ ಅಲ್ಲ, ಬಹಳ ಕೆಲಸಗಳಲ್ಲಿ ಅವರಿಗೆ ಹಾಕಿಕೊಂಡಿದ್ದ ಅಂದಾಜು ಮೀರಿ ಖರ್ಚು ಆಗಿದೆ, ಆಗುತ್ತಿದೆ. ಈಗ ಬ್ಯಾಂಕ್​ ಬಳಿ ಟಾಪ್​ಅಪ್​ಗೆ ಹೋಗಲು ಅವರಿಗೂ ಆಗುತ್ತಿಲ್ಲ. ಯಥಾ ಪ್ರಕಾರ ಎಷ್ಟು ಮೊತ್ತ ಹೆಚ್ಚಾಗಬಹುದೋ ಏನು ಮಾಡುವುದೋ ಹಣ ಹೊಂದಿಸುವುದು ಹೇಗೋ ಎಂಬ ಆತಂಕದಲ್ಲಿದ್ದಾರೆ.
 
ನಿರ್ಮಾಣಕ್ಕೆ ಬಳಸುವಂಥ ವಸ್ತುಗಳ ಬೆಲೆ ಹೆಚ್ಚಾದರೆ ಇಂತಿಷ್ಟು ಅಂತ ಬ್ಯಾಂಕ್​ಗಳಲ್ಲಿ ಟಾಪ್​ ಅಪ್​ ಮಾಡುವ ಅವಕಾಶ ಇದೆ. ಆದರೆ ಈಗಿನದು ಬಹಳ ವಿಚಿತ್ರ ಸನ್ನಿವೇಶ. ಡೀಸೆಲ್, ಸಿಮೆಂಟ್, ಉಕ್ಕು ಸೇರಿದಂತೆ ಎಲ್ಲವೂ ದುಬಾರಿ ಆಗಿವೆ. ಕೊನೆಗೆ ಕಟ್ಟಡ ಕಾರ್ಮಿಕರ ಕೂಲಿಯೂ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಬ್ಯಾಂಕ್​ಗಳು ಈಗಿನ ನಿಯಮದಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಇದೆ. ಅಷ್ಟೇ ಅಲ್ಲ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹೀಗೆ ವಿವಿಧ ಸ್ಥಳೀಯ ಸಂಸ್ಥೆಗಳು ನಕ್ಷೆ ಮಂಜೂರು ಮಾಡಿದ ಇಷ್ಟು ಸಮಯದೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿರುತ್ತದೆ. ಅದರಲ್ಲಿ ಕೂಡ ವಿನಾಯಿತಿ ನೀಡುವುದು ಅತ್ಯಗತ್ಯ ಎನ್ನುತ್ತಾರೆ ಎಸ್​ಬಿಐ ಹೌಸಿಂಗ್​ ಲೋನ್ ವಿಭಾಗದಲ್ಲೇ ಕಾರ್ಯ ನಿರ್ವಹಿಸುವ ಹೆಸರು ಹೇಳುವುದಕ್ಕೆ ಇಚ್ಛಿಸಿದ ಅಧಿಕಾರಿ.
 
ಆದರೆ, ಗೃಹ ಸಾಲದ ಟಾಪ್ ಅಪ್ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸಲೀಸಲ್ಲ. ಮತ್ತು ಇದು ಒಂದು ಬ್ಯಾಂಕ್​ನ ಸಂಗತಿ ಅಲ್ಲ. ಈಗಾಗಲೇ ಬ್ಯಾಂಕ್​ಗಳ ಸಾಲದ ಪೋರ್ಟ್​ಫೋಲಿಯೋಗಳನ್ನು ಗಮನಿಸಿದರೆ ಹೌಸಿಂಗ್​ ಲೋನ್​ಗಾಗಿಯೇ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿವೆ. ಇನ್ನು ಈಗ ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ನಿಂತುಹೋದವುಗಳಿಗೆ ಪರಿಹಾರ ಏನು ಅಂತ ಕಂಡುಕೊಳ್ಳದಿದ್ದರೆ ಗ್ರಾಹಕರು, ಬ್ಯಾಂಕ್​ಗಳು ಎರಡೂ ಕಡೆಯಿಂದಲೂ ಸಮಸ್ಯೆ ಆದೀತು.​

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ