ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್‌ಗೆ ದಂಡ
ಶನಿವಾರ, 3 ಡಿಸೆಂಬರ್ 2022 (13:15 IST)
ಮಂಡ್ಯ : ಸ್ಕ್ಯಾನಿಂಗ್ ವರದಿ ತಪ್ಪು ಕೊಟ್ಟು ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್ಗೆ 15 ಲಕ್ಷ ರೂ. ದಂಡ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಮದ್ದೂರಿನ ಡಿ2 ಡಯಾಗ್ನೋಸ್ಟಿಕ್ ಸೆಂಟರ್ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ 15 ಲಕ್ಷ ರೂ. ದಂಡ ಹಾಕಿ ಆದೇಶ ಹೊರಡಿಸಿದೆ.
ಸಿಂಧೂಶ್ರೀ ಅವರು ಮದ್ದೂರಿನ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಡಿ2 ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಪರೀಕ್ಷೆ ಮಾಡಿಸಿದ್ದರು. ಭ್ರೂಣದ ಅಸಹಜ ಬೆಳವಣಿಗೆ ಪತ್ತೆ ಹಚ್ಚದೇ ತಪ್ಪು ಸ್ಕ್ಯಾನಿಂಗ್ ವರದಿಯನ್ನು ವೈದ್ಯರು ನೀಡಿದ್ದರು. ಇತ್ತ ಸ್ಕ್ಯಾನಿಂಗ್ ವರದಿ ಆಧರಿಸಿ ಸಿಂಧೂಶ್ರೀಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು.
ಇದಾದ ಬಳಿಕ ಮಂಡ್ಯ ಮಿಮ್ಸ್ನಲ್ಲಿ ಸಿಂಧೂ ಶ್ರೀಗೆ ಹೆರಿಗೆಯಾಗಿತ್ತು. ಈ ವೇಳೆ ಅಸಹಜವಾಗಿ ಬೆಳವಣಿಗೆಯಾಗಿದ್ದ ಮಗು ಕಂಡು ಪೋಷಕರು ಕಂಗಲಾಗಿದ್ದರು. ಗರ್ಭಿಣಿಯಾದ 20ನೇ ವಾರ ಮಗುವಿನ ಹೃದಯದ ಬಡಿತ, ಕಿಡ್ನಿ, ಮೆದುಳಿನ ಬೆಳವಣಿಗೆ ಬಗ್ಗೆ ಸ್ಕ್ಯಾನಿಂಗ್ನಲ್ಲಿ ಪತ್ತೆ ಹಚ್ಚಲಾಗುತ್ತೆ.
ಆ ವೇಳೆ ಮಗುವಿನ ಅಸಹಜ ಬೆಳವಣಿಗೆ ಕಂಡು ಬಂದರೆ ಕಾನೂನು ಬದ್ಧವಾಗಿ ತೆಗೆಯಲು ಅವಕಾಶ ಇದೆ. ಆದರೆ ಗರ್ಭಿಣಿಯ 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆಯಲ್ಲಿ ತಪ್ಪು ವರದಿ ಕೊಟ್ಟಿದ್ದರು. ಡಯಾಗ್ನೋಸ್ಟಿಕ್ ಸೆಂಟರ್ನ ವೈದ್ಯರು ಸ್ಕ್ಯಾನಿಂಗ್ ತಪ್ಪು ವರದಿ ಕಾರಣ ಇದೀಗ ಈ ಸಮಸ್ಯೆ ಉಂಟಾಗಿದೆ.