ಈ ಬಾರಿ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಜನರೂ ತಕ್ಕ ಶಿಕ್ಷೆ ನೀಡಿದ್ದಾರೆ- ಪಶ್ಚಾತ್ತಾಪ ಪಟ್ಟ ದೇವೇಗೌಡರು

ಭಾನುವಾರ, 30 ಜೂನ್ 2019 (06:35 IST)
ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಹೀನಾಯವಾಗಿ ಸೋಲನುಭವಿಸಿದ ಹಿನ್ನಲೆಯಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ.




ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂದೂ ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದ ಮೂವರು ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿದ್ದನ್ನು ನೋಡಿದ್ದೇನೆ. ಇದಕ್ಕೆ ಜನರೂ ತಕ್ಕ ಶಿಕ್ಷೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಅಲ್ಲದೇ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿಕೊಂಡು ಬಂದೆ. ನಾನು ಚುನಾವಣೆಗೆ ನಿಂತಿದ್ದೂ ಆಕಸ್ಮಿಕ. ಇನ್ನು ನಾನು ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆಗೆ ಸಾಕಷ್ಟು ದುಡಿದಿದ್ದೇನೆ. ನನ್ನ ಕಾಲ ಮುಗಿಯುತ್ತಾ ಬಂದಿದೆ. ಕೊನೆ ಉಸಿರಿರುವ ವರೆಗೆ ಪಕ್ಷದ ಏಳಿಗೆಗಾಗಿ ದುಡಿಯುತ್ತೇನೆ. ಇನ್ನು ಮುಂದೆ ಮುಂದಿನ ಪೀಳಿಗೆಯ ಜವಾಬ್ದಾರಿ ಎಂದು ಅವರು ಭಾವುಕರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ