ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಂದು ವಾರಕ್ಕೆ ಲಾಕ್ ಡೌನ್ ವಿಸ್ತರಿಸಿರುವುದು ದುಡಿಯುವ ವರ್ಗದವರ ಅಸಮಾಧಾನಕ್ಕೆ ಕಾರಣವಾಗಿದೆ.
ದುಡಿಯುವ ಮಧ‍್ಯಮ ವರ್ಗದವರಿಗೆ ಕಳೆದ ಎರಡು ತಿಂಗಳಿನಿಂದ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದಾಗಿದೆ. ಅತ್ತ ಸರ್ಕಾರದ ಸೌಲಭ್ಯಗಳೂ ಕೈಗೆಟುಕುತ್ತಿಲ್ಲ. ಹೀಗಿರುವಾಗ ಮನೆ ಬಾಡಿಗೆ, ಖರ್ಚು ವೆಚ್ಚಗಳನ್ನು ನಿಭಾಯಿಸುವುದು ತಲೆನೋವಾಗಿದೆ. ಹೀಗಾಗಿ ಈ ವರ್ಗದವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇನ್ನು, ಹೋಟೆಲ್ ಕಾರ್ಮಿಕರು, ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡ ವ್ಯಾಪಾರಸ್ಥರು, ಉಪನ್ಯಾಸಕರದ್ದೂ ಇದೇ ಕತೆ. ಎರಡು ತಿಂಗಳಿಂದ ದುಡಿಮೆಯಿಲ್ಲ. ಸರ್ಕಾರವೂ ಯಾವುದೇ ಸಹಾಯ ಮಾಡುತ್ತಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಮತ್ತಷ್ಟು ದಿನ ಲಾಕ್ ಡೌನ್ ಮಾಡಿದರೆ ನಾವು ಬದುಕುವುದು ಹೇಗೆ ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.