ಬಿಪಿನ್ ರಾವತ್ ಸಾವು ಸಂಭ್ರಮಾಚರಣೆ ಮಾಡಿದವನ ಬಂಧನ

ಸೋಮವಾರ, 13 ಡಿಸೆಂಬರ್ 2021 (17:46 IST)
ತಮಿಳುನಾಡಿನಲ್ಲಿ (Tamilnadu) ಸಂಭವಿಸಿದ ವಿಮಾನ ದುರಂತದಲ್ಲಿ ಹುತಾತ್ಮರಾದ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ (Bipin Rawat) ಅವರ ಬಗ್ಗೆ ಅವಹೇಳಕಾರಿಯಾಗಿ ಪೋಸ್ಟ್‌ ಹಾಕಿದ ಆರೋಪದ ಮೇರೆಗೆ ಕಿಡಿಗೇಡಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೈಸೂರಿನ ಮೂಲದ ಟಿ.ಕೆ.ವಸಂತ್‌ ಕುಮಾರ್‌ (TK Vasanth Kumar) ಬಂಧಿತ ವ್ಯಕ್ತಿ. ನಗರ ಪೊಲೀಸ್‌ ಆಯುಕ್ತರ ಕಚೇರಿಯ ಕಮಾಂಡ್‌ ಸೆಂಟರ್‌ನಲ್ಲಿರುವ ಸೋಷಿಯಲ್‌ ಮೀಡಿಯಾ (Social Media) ಘಟಕದ ಸಬ್‌ ಇನ್‌ಸ್ಪೆಕ್ಟರ್‌ ದೀಪಾ ನೀಡಿದ್ದ ಮಾಹಿತಿ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವಸಂತ್‌ ಕುಮಾರ್‌, ಖಾಸಗಿ ಲ್ಯಾಬ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ತಮಿಳುನಾಡಿನಲ್ಲಿ ಸಂಭವಿಸಿದ ವಿಮಾನ ದುರಂತದ ವಿಚಾರ ತಿಳಿದ ಆತ, ತನ್ನ ಫೇಸ್‌ಬುಕ್‌ ಖಾತೆಯಲ್ಲಿ 'ಬಿಪಿನ್‌ ರಾವತ್‌, (Bipin Rawat) ಮೋದಿ ಗುಲಾಮಿತನದ ತಲೆಮಾರು. ಚೀನಾ ಒಂದು ಹಳ್ಳಿಯನ್ನು ನಿರ್ಮಿಸಿದಾಗಲೂ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟವ್ಯಕ್ತಿ. ಸದ್ಯಕ್ಕೆ ಅವರ ಕುಟುಂಬಕ್ಕೆ ಸಮಾಧಾನ ಸಿಗಲಿ. ಅವರ ಸಾವಿನಿಂದ ದೇಶವಂತೂ ಪಾರಾಗಿದೆ. ಅವರ ಜಾಗಕ್ಕೆ ನಿಜವಾದ ಒಬ್ಬ ಗಂಡು ಮಗ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ನಾನು ಸಮಾಧಾನವಾಗಿದ್ದೇನೆ. ನಮಗೂ ಆತ್ಮಕ್ಕೂ ಸಂಬಂಧವಿಲ್ಲ. ಆದರೂ, ಹಿರಿಯರಿಗೋಸ್ಕರ ಅವರ ಆತ್ಮಕ್ಕೆ ಸಮಾಧಾನ ಸಿಗಲಿ' ಎಂದು ಪೋಸ್ಟ್‌ (Post) ಹಾಕಿದ್ದ.
 
ಈ ಪೋಸ್ಟ್‌ ಬಗ್ಗೆ ಹಲವು ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಅವಹೇಳನಕಾರಿ ಬರಹಗಳನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು, ಬಿಪಿನ್‌ ರಾವ್‌ ಸಾವಿನ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಹಾಕುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದರು. ಈ ಸೂಚನೆ ಬೆನ್ನಲ್ಲೇ ಕಾರ್ಯಚರಣೆಗಿಳಿದ ಪೊಲೀಸರು, ಮೈಸೂರಿನಲ್ಲಿ ವಸಂತ್‌ ಕುಮಾರ್‌ನನ್ನು ಪತ್ತೆ ನಗರಕ್ಕೆ ಕರೆ ತಂದಿದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ