ನಕಲಿ ಅಂಕ ಪಟ್ಟಿ ನೀಡಿದ ಶಾಸಕನ ಎಂಎಲ್‌ಎ ಸ್ಥಾನವೇ ಹೋಯ್ತು ಜೈಲು ಸೇರಿದ ಬಿಜೆಪಿ ಶಾಸಕ
ಶುಕ್ರವಾರ, 10 ಡಿಸೆಂಬರ್ 2021 (17:07 IST)
ನಕಲಿ ಅಂಕಪಟ್ಟಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕನನ್ನು ಅನರ್ಹಗೊಳಿಸಿ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯ ಗೋಸಾಯಿ ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ ಖುಬ್ಬು ತಿವಾರಿ ಅವರಿಗೆ 28 ವರ್ಷಗಳ ಹಿಂದಿನ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.
1992 ರಲ್ಲಿ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರು ನಕಲಿ ಅಂಕಪಟ್ಟಿ ನೀಡಿದ ಬಗ್ಗೆ ದೂರು ದಾಖಲಿಸಿದ್ದರು.
ಕಾಲೇಜು ಪ್ರವೇಶ ಪಡೆಯಲು ಇಂದ್ರ ಪ್ರತಾಪ್ ಅವರು ನಕಲಿ ಅಂಕಪಟ್ಟಿ ಬಳಸಿದ್ದರು. ಈ ಹಿನ್ನೆಲೆಯಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಉತ್ತರಪ್ರದೇಶ ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ವಿಧಾನ ಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ದುಬೆ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.
ಅಯೋಧ್ಯೆಯ ಸಂಸದರು/ಶಾಸಕರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾ ಸಿಂಗ್ ಅಕ್ಟೋಬರ್ 18 ರಂದು ತೀರ್ಪು ನೀಡಿದ್ದರು. ತಿವಾರಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ.