ಬಜೆಟ್ ನಲ್ಲಿ ಬೆಂಗಳೂರಿಗೆ ಸಿಎಂ ಕೊಟ್ಟಿದ್ದೇನು?

ಶುಕ್ರವಾರ, 4 ಮಾರ್ಚ್ 2022 (17:10 IST)
ಬೆಂಗಳೂರು: ಕರ್ನಾಟಕ ಬಜೆಟ್ 2022 ರಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಕೊಡುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.

33 ಕಿ.ಮೀ. ಮೆಟ್ರೋ ಮಾರ್ಗ ಸೇರ್ಪಡೆ, ಕೆರೆ, ನೀರುಗಾಲುವೆ, ಪಾರ್ಕ್, ತ್ಯಾಜ್ಯ ನಿರ್ವಹಣೆ, ಸ್ಲಂ ಅಭಿವೃದ್ಧಿ, ಬೆಂಗಳೂರಿನ ಮೂಲಭೂತ ಸೌಕರ್ಯಾಭಿವೃದ್ಧಿಗೆ 6 ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದೆ.

2022-23 ನೇ ಸಾಲಿನಲ್ಲಿ 37 ಕಿ.ಮೀ. ಉದ್ದದ ಸರ್ಜಾಪುರ, ಅಗರ, ಕೋರಮಂಗಲ, ಡೈರಿ ವೃತ್ತದ ಮೂಲಕ ಹೆಬ್ಬಾಳವರೆಗೆ 36 ಕಿ.ಮೀ. ರಿಂಗ್ ರಸ್ತೆ ನಿರ್ಮಾಣ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ 13 ಕಿ.ಮೀ. ರಸ್ತೆ ಕಾಮಗಾರಿಗೆ 15 ಸಾವಿರ ಕೋಟಿ ರೂ. ವೆಚ್ಚಮಾಡಲಾಗುವುದು.

ಬನಶಂಕರಿ ಜಂಕ್ಷನ್ ನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸ್ಕೈ ವಾಕ್ ನಿರ್ಮಾಣ. ವೈಟ್ ಫೀಲ್ಡ್, ಕೆ.ಆರ್ ಪುರಂ, ಯಶವಂತಪುರ, ಜ್ಞಾನ ಭಾರತಿ ನಿಲ್ದಾಣಗಳಲ್ಲಿ ರೈಲ್ವೇಯೊಂದಿಗೆ ಮೆಟ್ರೋ ಸಂಪರ್ಕ ಕಾಮಗಾರಿ ನಡೆಸಲಾಗುವುದು. ಗೊರಗುಂಟೆಪಾಳ್ಯದಲ್ಲಿ ಗ್ರೇಡ್ ಸಪರೇಟರ್ ಮೇಲ್ಸೇತುವೆ ನಿರ್ಮಾಣ, ನಗರದ ಎನ್ ಜಿಎಫ್ ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ ನಿರ್ಮಾಣ.

ಕಾವೇರಿ ನೀರು ತರಲು 5,500 ಕೋಟಿ ರೂ. ವೆಚ್ಚದಲ್ಲಿ ಐದನೇ ಹಂತದ ಕಾಮಗಾರಿ. ರಾಜಕಾಲುವೆ ಅಭಿವೃದ್ಧಿ ಪಡಿಸಿ ನಾಗರಿಕ ವಿಹಾರ ಕೇಂದ್ರವಾಗಿಸುವುದು, ವಿವಿಧ ಭಾಗಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ನಿರ್ಮಾಣ, ಮಡಿವಾಳ ಕೆರೆ, ಎಲೆಮಲ್ಲಪ್ಪಶೆಟ್ಟಿ ಕೆರೆ ಅಭಿವೃದ್ಧಿ, ನಗರದ ನಾಲ್ಕು ಭಾಗಗಳಲ್ಲಿ 500 ಹಾಸಿಗೆಯುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ಬೆಂಗಳೂರು ಪಬ್ಲಿಕ್ ಶಾಲೆ ಅಭಿವೃದ್ಧಿ ಪಡಿಸಲು ಪ್ರತ್ಯೇಕ ಹಣ ನಿಗದಿಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ