ಪಿಎಂ-ಕಿಸಾನ್ ಯೋಜನೆ: ರೈತರು ಆರ್ಥಿಕ ನೆರವಿಗೆ ಇದನ್ನು ಮಾಡಲೇಬೇಕು
ಭಾನುವಾರ, 23 ಜೂನ್ 2019 (19:33 IST)
ಭಾರತ ಸರ್ಕಾರದ “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಂದಲೂ ತ್ವರಿತಗತಿಯಲ್ಲಿ ಸ್ವಯಂ ಘೋಷಣೆ ಪಡೆಯಬೇಕು. ಹೀಗಂತ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 4,21,715 ರೈತ ಫಲಾನುಭವಿಗಳನ್ನು ಗುರುತಿಸಲಾಗಿದೆ. ಇದುವರೆಗೆ ಕೇವಲ 1,40,000 ಫಲಾನುಭವಿಗಳಿಂದ ಮಾತ್ರ ಸ್ವಯಂ ಘೋಷಣೆ ಬಂದಿವೆ. ಉಳಿದ 2.81 ಲಕ್ಷ ಫಲಾನುಭವಿಗಳಿಂದಲೂ ತ್ವರಿತಗತಿಯಲ್ಲಿ ಸ್ವಯಂ ಘೋಷಣೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಆರ್.ಡಿ.ಪಿ.ಆರ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸ್ವಯಂ ಘೋಷಣೆ ಸಲ್ಲಿಸಿದವರ ಪೈಕಿ ಇದೂವರೆಗೆ 50,000 ಫಲಾನುಭವಿಗಳ ಡಾಟಾ ಎಂಟ್ರಿ ಅಪಲೋಡ್ ಮಾಡಲಾಗಿದೆ. ಉಳಿದ ಅಪಲೋಡ್ ಕಾರ್ಯ ಶೀಘ್ರವೆ ಮಾಡಿ ಮುಗಿಸಬೇಕು ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ರೈತರ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು 6,000 ರೂ. ಗಳ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರವು ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಿದೆ ಎಂದರು.