ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 14 ರಂದು ಮೈಸೂರು, ಮಂಗಳೂರಿನಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.
ಮೈಸೂರು ಮತ್ತು ಮಂಗಳೂರು ಬಿಜೆಪಿಯ ಭದ್ರ ಕೋಟೆ. ಮೈಸೂರಿನಲ್ಲಿ ರಾಜವಶಂಸ್ಥ ಯದುವೀರ್ ಒಡೆಯರ್ ಕಣಕ್ಕಿಳಿದಿದ್ದರೆ ಮಂಗಳೂರಿನಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣಕ್ಕಿಳಿದಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳು ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಚಾರವಾಗಿದೆ.
ಮೊದಲು ಪ್ರಧಾನಿ ಮೋದಿ ಮಂಗಳೂರಿನಲ್ಲಿಯೇ ಸಮಾವೇಶ ಮತ್ತು ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಪ್ರಧಾನಿ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ಮೈಸೂರಿನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಮಂಗಳೂರಿನಲ್ಲಿ ಕೇವಲ ರೋಡ್ ಶೋ ನಡೆಸಲಿದ್ದಾರೆ. ಮೈಸೂರಿನಲ್ಲಿ ಸಂಜೆ 4 ಗಂಟೆಗೆ ಸಮಾವೇಶವನ್ನುದ್ದೇಶಿಸಿ ಮಾತನಾಡಲಿರುವ ಅವರು ಬಳಿಕ ಸಂಜೆ 6 ಗಂಟೆಗೆ ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ನವಭಾರತ ವೃತ್ತದವರೆಗೆ ರೋಡ್ ಶೋ ನಡೆಸಲಿದ್ದಾರೆ.