ಇಂಧೋರ್: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ರನ್ನು ಪಾಕಿಸ್ತಾನಕ್ಕೆ ಪಾರ್ಸೆಲ್ ಮಾಡ್ತೇವೆ ಎಂದು ಮಧ್ಯಪ್ರದೇಶದ ಬಿಜೆಪಿ ಎಂಎಲ್ಎ ರಾಮೇಶ್ವರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಧ‍್ಯಪ್ರದೇಶದ ರಾಜ್ ಘರ್ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಎಂಎಲ್ಎ ರಾಮೇಶ್ವರ್, ಇಲ್ಲಿ ಕಾಂಗ್ರೆಸ್ ನಾಯಕನನ್ನು ಸೋಲಿಸಿದ ಬಳಿಕ ಭಾರತಕ್ಕೆ ವಾಪಸ್ ಬರದಂತೆ ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ.
ರಾಜ್ ಘರ್ ನಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ನಮ್ಮ ಕಾರ್ಯಕರ್ತರು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಇಲ್ಲಿ ನಮ್ಮ ಅಭ್ಯರ್ಥಿ 8 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ಖಂಡಿತಾ. ಅದಾದ ಬಳಿಕ ಇಲ್ಲಿ ಓಡಾಡಿಕೊಂಡಿರುವ ರಾಜ (ದಿಗ್ವಿಜಯ್ ಸಿಂಗ್)ನನ್ನು ಮತ್ತೆಂದೂ ಹಿಂದೂಸ್ಥಾನಕ್ಕೆ ಬಾರದಂತೆ ಪಾಕಿಸ್ತಾನಕ್ಕೆ ಕಳುಹಿಸಲಾಗುವುದು. ಇಲ್ಲಿ ಅವರ ಯಾವ ಅಭಿಮಾನಿಗಳೂ ಇಲ್ಲ. ಅವರ ಅಭಿಮಾನಿಗಳೇನಿದ್ದರೂ ಪಾಕಿಸ್ತಾನದಲ್ಲಿರುತ್ತಾರೆ ಎಂದಿದ್ದಾರೆ.
ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್ ಬಿಜೆಪಿ ನಾಯಕರ ಇಂತಹ ಹೇಳಿಕೆ ಹೊಸದೇನಲ್ಲ. ಅವರಿಗೆ ಹೇಳಲು ಬೇರೆ ಕಾರಣಗಳಿಲ್ಲ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿರುತ್ತಾರೆ. ನನ್ನ ವಕೀಲರು ಈ ಹೇಳಿಕೆಯ ಕುರಿತಂತೆ ಮುಂದಿನ ಕ್ರಮ ಕೈಗೊಳ್ಳುವುದರ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದಿದ್ದಾರೆ.