ಕೊರೊನಾ ನೆಗೆಟಿವ್ ಇದ್ದಾಗ ವಿಷ ಕುಡಿದ ; ಪಾಸಿಟಿವ್ ಬಂದಾಗ ಆತ್ಮಹತ್ಯೆ ಮಾಡಿಕೊಂಡ

ಶನಿವಾರ, 1 ಆಗಸ್ಟ್ 2020 (22:56 IST)
ಕೊರೊನಾ ವೈರಸ್ ಗೆ ಹೆದರಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೊರೊನಾಗೆ ಹೆದರಿದ ವ್ಯಕ್ತಿಯೊಬ್ಬರು  ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ತಪ್ಪಿಸಿಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಂತಾಮಣಿ ತಾಲೂಕು ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ 55 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡವರು.  
ತಿಂಗಳಿಂದ ಮನೆಗೂ ಹೋಗದೆ ಗ್ರಾಮದಲ್ಲಿ ತೋಟದ ಮನೆಯಲ್ಲಿ ವಾಸ ಮಾಡುತ್ತಾ ಜೀವನ ಕಳೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಮಗ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಈತನಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು ನೆಗಟಿವ್ ಸಹ ಬಂದಿತ್ತು. ಆದರೆ ಅದ್ಯಾಕೋ ಏನೋ ಅದೇ ಭಯದಲ್ಲೇ ಇದ್ದ ಈತ, ಅಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು.

ಕೂಡಲೇ ಮನೆಯವರು ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಸ್ಥಳಾಂತರ  ಮಾಡಿದ್ದರು. ಚಿಕಿತ್ಸೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಕೋವಿಡ್ ಪರೀಕ್ಷೆ  ಮಾಡಿಸಿದ್ದು, ಕೋವಿಡ್ ಪಾಸಿಟಿವ್ ಎಂದು ತಿಳಿದುಬಂದಿದೆ.

ಇದರಿಂದ ಸಂಜೆ ಈತನನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಡೀ ರಾತ್ರಿ ನಾನು ಮನೆಗೆ ಹೋಗಬೇಕು ಅಂತ ಪಟ್ಟು ಹಿಡಿದಿದ್ದಾನೆ. ಕೊನೆಗೆ ಮನೆಗೆ ಕಳುಹಿಸಲ್ಲ ಅಂದಿದ್ದಕ್ಕೆ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ ನಂತರ ಅಲ್ಲಿಂದ ತಪ್ಪಿಸಿಕೊಂಡು ಪರಾರಿ ಆಗಿದ್ದಾನೆ.  ಗುಂತಪನಹಳ್ಳಿ ಗ್ರಾಮದ ಬಳಿ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ