ವಿಷ ಪ್ರಸಾದ ದುರಂತ; ಪ್ರವಾಸಿ ಮಂದಿರದಲ್ಲಿ ಪರಿಹಾರ ಧನ ವಿತರಣಾ ಬಗ್ಗೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದೇನು?
ಮಂಗಳವಾರ, 18 ಡಿಸೆಂಬರ್ 2018 (12:33 IST)
ಚಾಮರಾಜನಗರ : ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನ ನೀಡುವ ವಿಚಾರದಲ್ಲಿ ಇದೀಗ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರ ನಡೆಗೆ ಖಂಡನೆ ವ್ಯಕ್ತವಾಗಿದೆ.
ಇಂದು ಮಧ್ಯಾಹ್ನ 2.30 ಕ್ಕೆ ಹನೂರಿನ ಪ್ರವಾಸಿ ಮಂದಿರದಲ್ಲಿ ಪರಿಹಾರ ಧನ ವಿತರಣಾ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು, ಮೃತರ ಕುಟುಂಬಸ್ಥರು ಬಂದು ಪರಿಹಾರ ಧನ ಸ್ವೀಕರಿಸಬೇಕು ಎನ್ನಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮತ ಕೇಳುವಾಗ ಜನಪ್ರತಿನಿಧಿಗಳು ಮನೆ ಬಾಗಿಲಿಗೆ ಬರುತ್ತಾರೆ. ಆದರೆ, ಪರಿಹಾರ ಪಡೆಯಲು ಸಚಿವರ ಬಳಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಮೃತ ಕುಟುಂಬದವರು ಮೊದಲೇ ಕುಟುಂಬಸ್ಥರನ್ನು ಕಳೆದುಕೊಂಡು ದುಃಖಿತರಾಗಿದ್ದು, ಪರಿಹಾರ ಹಣ ಪಡೆಯಲು 50 ಕಿ.ಮೀ ಪ್ರಯಾಣಿಸಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದಲ್ಲಿ ಪ್ರಸಾರವಾದ ವರದಿ ಕೇಳಿ ಎಚ್ಚೆತ್ತುಕೊಂಡ ಸಚಿವ ಪುಟ್ಟರಂಗಶೆಟ್ಟಿ ಅವರು,’ಇದೆಲ್ಲಾ ಕೇವಲ ಹುಟ್ಟು ಹಾಕಿರುವುದು. ಇದರಲ್ಲೂ ರಾಜಕೀಯ ಮಾಡುವವರಿಗೆ ಏನು ಹೇಳಬೇಕು. ಮೃತ ಕುಟುಂಬಸ್ಥರ ಮನೆಗೆ ಖುದ್ದು ಭೇಟಿ ನೀಡುತ್ತೇವೆ. ಎಲ್ಲರ ಮನೆಗಳಿಗೂ ತೆರಳಿ ಪರಿಹಾರದ ಚೆಕ್ ವಿತರಿಸುತ್ತೇವೆ. ನಾನು ಪ್ರವಾಸಿ ಮಂದಿರದಲ್ಲಿ ಚೆಕ್ ವಿತರಿಸುವುದಾಗಿ ಹೇಳಿಲ್ಲ. ಈಗಾಗಲೇ 11 ಮನೆಗಳಿಗೆ ತಲಾ 50 ಸಾವಿರ ಹಣ ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.