ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ನಿರ್ಮಾಣವಾಗಿರುವ ಬೆಂಗಳೂರು ಸೇಫ್ ಸಿಟಿ ನಿಯಂತ್ರಣ ಕೋಣೆಯ ವಿಶೇಷತೆಗಳ ಕುರಿತು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ. ನಿರ್ಭಯಾ ಪ್ರಕರಣದ ಬಳಿಕ ದೇಶದ ಮಹಾನಗರಗಳಲ್ಲಿ ನಿರ್ಮಾಣವಾಗುತ್ತಿರುವ ಸೇಫ್ ಸಿಟಿ ಯೋಜನೆಯ ಮೊದಲ ಹಂತದ ಸಿದ್ದತೆ ಬೆಂಗಳೂರು ನಗರದಲ್ಲಿ ಪೂರ್ಣಗೊಂಡಿದ್ದು ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟನೆ ನಡೆಸಿದ್ದರು.
ಯೋಜನೆಯಲ್ಲಿ ನಗರದಾದ್ಯಂತ 4100 ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು ಇನ್ನೂ 3 ಸಾವಿರ ಕ್ಯಾಮೆರಾ ಅಳವಡಿಸುವುದು ಬಾಕಿಯಿದೆ. ಎಚ್.ಡಿ ಕ್ಯಾಮೆರಾ, 360 ಡಿಗ್ರಿ, ಡ್ರೋಣ್, ಬಾಡಿ ವೋರ್ನ್ ಕ್ಯಾಮೆರಾಗಳನ್ನ ಈ ವ್ಯವಸ್ಥೆಯು ಹೊಂದಿದ್ದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಪ್ರತೀ ಕ್ಯಾಮೆರಾದ ಲೈವ್, ಹಾಗೂ ಹಿಂದಿನ ದೃಶ್ಯಗಳನ್ನ ವೀಕ್ಷಿಸಬಹುದಾಗಿದೆ. ಮತ್ತು ಪ್ರತಿ ಠಾಣೆಗಳಲ್ಲಿ ಆಯಾ ಠಾಣೆಗಳ ವ್ಯಾಪ್ತಿಯ ಕ್ಯಾಮೆರಾ ದೃಶ್ಯಗಳನ್ನ ವೀಕ್ಷಿಸಲು ಸಾಧ್ಯ. ಇದಲ್ಲದೇ ನಗರದ 30 ಭಾಗಗಳಲ್ಲಿ ಸೇಫ್ಟಿ ಐಲ್ಯಾಂಡ್ ವಿತ್ ಅಲರ್ಟ್ ಬಟನ್ ನಿರ್ಮಿಸಲಾಗಿದೆ.ಯಾವುದೇ ಅಪರಾಧ ನಡೆದಾಗ ಸೇಫ್ಟಿ ಐಲ್ಯಾಂಡ್ ಬಳಿ ಬಂದು ಬಟನ್ ಪ್ರೆಸ್ ಮಾಡಿದರೆ ತಕ್ಷಣ ಸೈರನ್ ನಿಯಂತ್ರಣ ಕೊಠಡಿಗೆ ವರ್ಗಾವಣೆಯಾಗಲಿದೆ. ಜೊತೆಗೆ ಪಕ್ಕದಲ್ಲಿರುವ ಕ್ಯಾಮೆರಾ ಸೇಫ್ಟಿ ಐಲ್ಯಾಂಡ್ ಸಮೀಪದಲ್ಲಿರುವ ಲೈವ್ ದೃಶ್ಯಗಳನ್ನ ನಿಯಂತ್ರಣ ಕೊಠಡಿಗೆ ರವಾನಿಸಲಿದೆ. ವಿಶೇಷವೆಂದರೆ ಸೇಪ್ಟಿ ಐಲ್ಯಾಂಡಿನಿಂದ ಫೋನ್ ಇಲ್ಲದೆಯೇ ನೇರವಾಗಿ ನಿಯಂತ್ರಣ ಕೊಠಡಿಯನ್ನ ಸಂಪರ್ಕಿಸಬಹುದು.
ಯೋಜನೆಯ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿ '2019ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಸೇಫ್ ಸಿಟಿ ಯೋಜನೆ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಸುನಿಲ್ ಕುಮಾರ್ ಅವಧಿಯಲ್ಲಿ ಆರಂಭವಾಗಿದ್ದು 667 ಕೋಟಿ ಮೌಲ್ಯದ್ದಾಗಿದೆ. ಸದ್ಯ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು ಸಾಕಷ್ಟು ವಿಶೇಷತೆಗಳನ್ನ ಹೊಂದಿದೆ. ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಸುನಿಲ್ ಕುಮಾರ್, ಅಲೋಕ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್, ಐಪಿಎಸ್ ಅಧಿಕಾರಿಗಳಾದ ಸೌಮೇಂದು ಮುಖರ್ಜ, ಸುಬ್ರಹ್ಮಣ್ಯೇಶ್ವರ್ ರಾವ್, ಸಂತೋಷ್ ಬಾಬು, ಚಂದ್ರಶೇಖರ್ ರಾವ್, ನಿಶಾ ಜೇಮ್ಸ್, ಲಕ್ಷ್ಮೀ ಪ್ರಸಾದ್ ಸೇರಿದಂತೆ ಯೋಜನೆಯ ಭಾಗವಾಗಿರುವ ಪ್ರತಿಯೊಬ್ಬ ಅಧಿಕಾರಿಯ ಕೆಲಸ ಶ್ಲಾಘನೀಯ ಎಂದರು.