ಬೆಂಗಳೂರು : ಕೈಲಿದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಓಡುತ್ತಿದ್ದ ಕಳ್ಳನೊಬ್ಬನನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಬೆನ್ನಟ್ಟಿ ಹಿಡಿದಿರುವ ಘಟನೆ ಫೆ. 14 ರಂದು ಅಶೋಕ್ ನಗರದ ಖಾಸಗಿ ಕಾಲೇಜಿನ ಬಳಿ ನಡೆದಿದೆ. ಆದರೆ ಸಿಕ್ಕಿಹಾಕಿಕೊಂಡ ಬಳಿಕ ಕಳ್ಳ ಹೇಳಿದ ಕಥೆಗ ಮನಕರಗಿ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳನ್ನು ರಾಯಚೂರು ಮೂಲದ ಯುವಕನೊಬ್ಬ ಪ್ರೀತಿಸುತ್ತಿದ್ದ. ಪ್ರೇಮಿಗಳ ದಿನಾಚರಣೆಯಂದು ಆಕೆಗೆ ಸರ್ ಪ್ರೈಸ್ ನೀಡಬೇಕೆಂಬ ಉದ್ದೇಶದಿಂದ ಆಕೆಗೆ ತಿಳಿಸದೇ ಕಾಲೇಜಿನ ಬಳಿ ಬಂದಿದ್ದ.
ಕಾಲೇಜಿನ ಬಳಿ ಆ ಯುವತಿ ಮತ್ತೊಬ್ಬ ಯುವಕನೊಡನೆ ನಿಕಟವಾಗಿರುವುದನ್ನು ನೋಡಿ ಯುವಕ ರೊಚ್ಚಿಗೆದ್ದು ಗಲಾಟೆ ಮಾಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಆ ಯುವತಿ ಈತ ನನ್ನ ಪ್ರಿಯಕರನಲ್ಲ, ಕೇವಲ ಸ್ನೇಹಿತ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಳು. ಆದರೆ ತೃಪ್ತನಾಗದ ಭಗ್ನ ಪ್ರೇಮಿ ಅವರಿಬ್ಬರ ಮೊಬೈಲ್ ಚೆಕ್ ಮಾಡಲು ಮುಂದಾಗಿದ್ದ. ಅವರ ಮೊಬೈಲ್ ನ್ನು ಕಸಿದುಕೊಂಡು ಓಡುತ್ತಿದ್ದಂತೆಯೇ ಇಬ್ಬರೂ ಆತನ ಬೆನ್ನೆತ್ತಿದ್ದರು. ಇದನ್ನು ಕಂಡ ಸಂಚಾರಿ ವಿಭಾಗದ ಪೊಲೀಸ್ ಶಾಜಿಯಾ ತಬಸ್ಸುಂ ತಾವೂ ಸಹಾ ಅವರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದರು. ವಿಚಾರಣೆಯಲ್ಲಿ ಈ ಕಥೆ ಹೊರಬಂದಿದ್ದು, ಮೂವರನ್ನೂ ಕರೆಸಿ ಪೊಲೀಸರು ಬುದ್ದಿಮಾತು ಹೇಳಿ ಕಳಿಸಿದ್ದಾರೆ.