ಸಿಎಂ ವಿರುದ್ಧ ಅನಾಗರಿಕ ಭಾಷೆ ಬಳಕೆ ಬೇಡ: ಪೂಜಾರಿಗೆ ಸಚಿವ ರಾಯರೆಡ್ಡಿ ಸಲಹೆ

ಗುರುವಾರ, 2 ಫೆಬ್ರವರಿ 2017 (16:29 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅನಾಗರಿಕತೆಯ ಭಾಷೆ ಬಳಸುವುದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಜನಾರ್ದನ ಪೂಜಾರಿ ಅನಾಗರಿಕರಂತೆ ಟೀಕೆ ಮಾಡುವುದು ಸರಿಯಲ್ಲ. ಏನೇ ಅಸಮಾಧಾನ ಇರಲಿ, ಉತ್ತಮ ಪದ ಬಳಕೆ ಮಾಡಿ ಹೇಳಿಕೆ ನೀಡಬೇಕು. ಪಕ್ಷದ ಹಿರಿಯ ಮುಖಂಡರಾಗಿರುವ ಪೂಜಾರಿ ಅವರು ಮುಖ್ಯಮಂತ್ರಿಗಳ ವಿರುದ್ಧ ಕೆಟ್ಟ ಪದ ಬಳಸಿರುವುದಕ್ಕೆ ನನ್ನ ವಿರೋಧ ಇದೆ ಎಂದರು. 
 
ಮಾಜಿ ಮುಖ್ಯಮಂತ್ರಿ ಎಂ.ಎಂ.ಕೃಷ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರ ಬಗ್ಗೆ ಅಪಾರ ಗೌರವ ಇದೆ. ಅವರ ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನ ನಡೆಸುತ್ತೇದೆ. ಕೃಷ್ಣ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಹಂಕಾರ ಮಿತಿಮೀರಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿಕೆ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ