ಮಲೆತಿರಿಕೆ ಬೆಟ್ಟದಲ್ಲಿ ಕಳಪೆ ತಡೆಗೋಡೆ ನಿರ್ಮಾಣ: ವೀರಾಜಪೇಟೆ ನಾಗರಿಕ ಸಮಿತಿ ಆತಂಕ

ಶುಕ್ರವಾರ, 11 ಫೆಬ್ರವರಿ 2022 (17:02 IST)
ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ತಡೆಗೋಡೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿರುವ ವೀರಾಜಪೇಟೆ ನಾಗರಿಕ ಸಮಿತಿಯ ಪ್ರಮುಖರಾದ ಡಾ.ಇ.ರಾ.ದುರ್ಗಾಪ್ರಸಾದ್, ಕಾಮಗಾರಿ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು 2019ರಲ್ಲಿ ಕೊಡಗಿನಲ್ಲಿ ಸುರಿದ ಮಹಾಮಳೆಯಿಂದ ಮಲೆತಿರಿಕೆ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಅಧ್ಯಯನ ನಡೆಸಿದ ಭೂಗರ್ಭ ಇಲಾಖೆ ಬೆಟ್ಟದಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ಸಲಹೆ ನೀಡಿತ್ತು. ತಡೆಗೋಡೆ ನಿರ್ಮಾಣಗೊಂಡಿದೆಯಾದರೂ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಸುಮಾರು 20 ಮೀ ಎತ್ತರದ ಗೋಡೆಯನ್ನು ಸೂಕ್ತ ತಳಪಾಯವಿಲ್ಲದೆ ಅವೈಜ್ಞಾನಿಕ ರೂಪದಲ್ಲಿ ನಿರ್ಮಿಸಲಾಗಿದೆ. ಗೋಡೆ ನಿರ್ಮಾಣಗೊಂಡು ಕೆಲವೇ ತಿಂಗಳುಗಳು ಕಳೆದಿದ್ದು, ಒಂದು ಕಡೆ ವಾಲಿದೆ. ಒಂದು ಬದಿಯಲ್ಲಿ ಮಣ್ಣು ತುಂಬಿದ್ದು, ಮಳೆಗಾಲ ನೀರಿನ ರಭಸಕ್ಕೆ ತಡೆಗೋಡೆ ಬೀಳುವ ಸಾಧ್ಯತೆಗಳಿದೆ. ಈ ಭಾಗದಲ್ಲಿರುವ ದೇವಾಲಯ ಹಾಗೂ ಮನೆಗಳಿಗೆ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ನೀಡಿದ್ದರೂ ಕಳಪೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆರೋಪಿಸಿರುವ ದುರ್ಗಾಪ್ರಸಾದ್, ಬೆಟ್ಟದ ಮೇಲೆ ಮತ್ತು ಕೆಳ ಭಾಗದಲ್ಲಿರುವ ನಿವಾಸಿಗಳು ಆತಂಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರರಿಗೆ ಹಣವನ್ನು ಬಿಡುಗಡೆ ಮಾಡಬಾರದು, ಕಳಪೆ ಕಾಮಗಾರಿ ವಿರುದ್ಧ ಸೂಕ್ತ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವೈಜ್ಞಾನಿಕ ರೂಪದಲ್ಲಿ ತಡೆಗೋಡೆ ನಿರ್ಮಿಸಿ ಮಳೆಗಾಲದ ಅಪಾಯವನ್ನು ತಪ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ