ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಬಂಧನ ಭೀತಿಯಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ವಿದೇಶದಿಂದ ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಬೆಂಗಳೂರಿಗೆ ಬರುವ ಮೊದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಇಷ್ಟು ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಇದೀಗ ರಾಜಕೀಯ, ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು ಬೆಂಗಳೂರಿಗೆ ಬರುತ್ತಿದ್ದಾರೆ.
ಆದರೆ ಅವರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೇ ಅವರನ್ನು ಬಂಧಿಸಲು ಎಸ್ಐಟಿ ತಂಡ ಸಜ್ಜಾಗಿದೆ. ಆದರೆ ಬಂಧನ ಭೀತಿಯಿಂದ ಪ್ರಜ್ವಲ್ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ತ್ವರಿತ ವಿಚಾರಣೆಗೆ ಪ್ರಜ್ವಲ್ ಪರ ವಕೀಲರು ಆಗ್ರಹಿಸಿದ್ದರು. ಆದರೆ ಕೋರ್ಟ್ ಅದನ್ನು ನಿರಾಕರಿಸಿದೆ.
ಮೊನ್ನೆಯಷ್ಟೇ ವಿಡಿಯೋ ಸಂದೇಶ ನೀಡಿದ್ದ ಪ್ರಜ್ವಲ್ ಮೇ 31 ಕ್ಕೆ ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು. ಅವರು ಹಂಗೇರಿಯಿಂದ ವಿಡಿಯೋ ಮಾಡಿದ್ದರು ಎಂದು ಎಸ್ಐಟಿ ತಂಡ ಪತ್ತೆ ಹೆಚ್ಚಿದೆ. ವಿಮಾನ ಟಿಕೆಟ್ ಬುಕಿಂಗ್ ನಲ್ಲಿ ಪ್ರಜ್ವಲ್ ತಮ್ಮ ಮೊಬೈಲ್ ನಂಬರ್, ಈಮೇಲ್ ವಿವರ ನೀಡದೇ ಎಸ್ಐಟಿಗೆ ಚಳ್ಳೇ ಹಣ್ಣು ತಿನಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ವಿಡಿಯೋ ಐಪಿ ಅಡ್ರೆಸ್ ಹುಡುಕಿ ಹಂಗೇರಿಯಿಂದ ವಿಡಿಯೋ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಆದರೂ ಈ ವಿಡಿಯೋ ಲೈವ್ ಆಗಿರಲಿಲ್ಲ. ಎರಡು ದಿನ ಮೊದಲು ರೆಕಾರ್ಡ್ ಮಾಡಿರುವುದನ್ನು ಅಪ್ ಲೋಡ್ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿತ್ತು. ಹೀಗಾಗಿ ಪ್ರಜ್ವಲ್ ಯಾವ ದೇಶದಿಂದ ಬರುತ್ತಿದ್ದಾರೆ ಎನ್ನುವುದು ಖಚಿತವಾಗಿಲ್ಲ.