ಹೊಸಪೇಟೆ: ಆಪರೇಷನ್ ಸಿಂಧೂರ್ ಬಗ್ಗೆ ಚುಟ್ ಪುಟ್ ದಾಳಿ ಎಂದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ನಿಮಗೂ ಪಪ್ಪು ಮನಸ್ಥಿತಿ ಬಂತಾ ಎಂದು ಪ್ರಶ್ನಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಂತಹ ಹಿರಿಯ ನಾಯಕರು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ದಾಳಿಯನ್ನು ಚುಟ್ ಪುಟ್ ದಾಳಿ ಎಂದಿದ್ದು ನನಗೆ ಅಚ್ಚರಿಯಾಗಿದೆ. ಖರ್ಗೆ ಸಾಹೇಬ್ರೇ ನೀವ್ಯಾಕೆ ನಿಮ್ಮ ಮಗನ ರೀತಿ ಮಾತನಾಡಲು ಶುರು ಮಾಡಿದ್ದೀರಿ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಬಹುಶಃ ದೆಹಲಿಯಲ್ಲಿ ಕಾಂಗ್ರೆಸ್ ನ ಪಪ್ಪು ರಾಹುಲ್ ಗಾಂಧಿ ಜೊತೆ ಇದ್ದೂ ಇದ್ದೂ ಖರ್ಗೆ ಸಾಹೇಬ್ರಿಗೂ ಪಪ್ಪು ಮನಸ್ಥಿತಿ ಬಂದಿದೆಯಾ ಅಂತ ಅನುಮಾನವಾಗ್ತಿದೆ ನನಗೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಇದು ಚುಟು ಪುಟು ದಾಳಿ ನಂತರವೇ ಚೀನಾ, ಅಮೆರಿಕಾದಂತಹ ದೊಡ್ಡ ರಾಷ್ಟ್ರಗಳ ಏರ್ ಡಿಫೆನ್ಸ್ ಸಿಸ್ಟಂ ಕುಸಿದು ಹೋಗಿದ್ದು. ಈ ಚುಟುಪುಟು ದಾಳಿಯ ನಂತರವೇ ಪಾಕಿಸ್ತಾನದ 11 ವಾಯುನೆಲೆ ನಾಶವಾಗಿದ್ದು, ಈ ದಾಳಿಯ ನಂತರವೇ ನಮ್ಮ ಬ್ರಹ್ಮೋಸ್ ಕ್ಷಿಪಣಿಗೆ 17 ರಾಷ್ಟ್ರಗಳಿಂದ ಬೇಡಿಕೆ ಬಂದಿದ್ದು ಎಂದು ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ. ನಿಮ್ಮದೇ ಪಕ್ಷದ ಸಲ್ಮಾನ್ ಖುರ್ಷಿದ್ ಅವರೇ ನಿನ್ನೆ ಹೇಳಿಕೆ ನೀಡಿದ್ದಾರೆ. ಈ ದಾಳಿಯ ನಂತರವೇ ಪಾಕಿಸ್ತಾನದ ಹಿರಿಯ ಸೇನಾಧಿಕಾರಿ ಭಾರತಕ್ಕೆ ಕರೆ ಮಾಡಿ ಕದನ ವಿರಾಮ ಮಾಡೋಣ ಎಂದಿದ್ದು. ಚುಟು ಪುಟು ದಾಳಿ ಎಂದರೆ ಅವರು ಯಾಕೆ ಕರೆ ಮಾಡುತ್ತಿದ್ದರು? ಪಾಕಿಸ್ತಾನದ ಪ್ರಧಾನಿಯವರೇ ಭಾರತ ನಮ್ಮ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು ಎಂದಿದ್ದಾರೆ. ಚುಟುಪುಟು ದಾಳಿಯಲ್ಲಿ ಯಾರು ಸಾರ್ ಮಿಸೈಲ್ ಹಾಕ್ತಾರೆ? ಮೋದಿಯವರ ಮೇಲಿನ ಧ್ವೇಷಕ್ಕೆ ಭಾರತೀಯ ಸೇನೆಯ ದಾಳಿಯನ್ನೇ ಸಣ್ಣ ದಾಳಿ ಎನ್ನುತ್ತೀರಲ್ಲಾ ಇದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.