ಬೆಂಗಳೂರು: ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯಗೆ ಪ್ರತಿಪಕ್ಷ ಆರ್ ಅಶೋಕ್ 17 ಪ್ರಶ್ನೆ ಕೇಳಿದ್ದಾರೆ.
ಕುರ್ಚಿ ಗ್ಯಾರೆಂಟಿ ಇಲ್ಲದ ಲಾಟರಿ ಸಿಎಂ ಸಿದ್ದರಾಮಯ್ಯ ಅವರಿಂದ ಕುರ್ಚಿ ಉಳಿಸಿಕೊಳ್ಳಲು ಸಾಧನಾ ಸಮಾವೇಶ ಎಂಬ ಮತ್ತೊಂದು ಹಗಲುವೇಷ! ಸಿಎಂ ಸಿದ್ದರಾಮಯ್ಯನವರೇ, ಯಾವ ಸಾಧನೆ ಮಾಡಿದ್ದೀರಿ ಎಂದು ಈ ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಸ್ವಾಮಿ? ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ. ಇದರ ಜೊತೆಗೆ ಯಾವ ಪುರುಷಾರ್ಥಕ್ಕೆ ಸಮಾವೇಶ ಎಂದು 17 ಪ್ರಶ್ನೆಗಳನ್ನು ಕೇಳಿದ್ದಾರೆ.
❓ಹಾಲು, ನೀರು, ಕರೆಂಟು, ಪೆಟ್ರೋಲು, ಡಿಸೇಲ್, ಆಸ್ತಿ ತೆರಿಗೆ, ಹೀಗೆ ಎಲ್ಲ ದಿನಬಳಕೆ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿ ಬಡವರು ಮಧ್ಯಮ ವರ್ಗದ ಜೇಬಿಗೆ ಕತ್ತರಿ ಹಾಕಿದ್ದಕ್ಕೆ ಈ ಸಮಾವೇಶಾನಾ?
❓ಮೂಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ನಾಮಕಾವಸ್ತೆ ತನಿಖೆ ಮಾಡಿಸಿ ಬಿ-ರಿಪೋರ್ಟ್ ಹಾಕಿಸಿಕೊಂಡು ಕ್ಲೀನ್ ಚಿಟ್ ಪಡೆದ ಸಾಧನೆಗೆ ಈ ಸಮಾವೇಶಾನಾ?
❓ಕಾಂಗ್ರೆಸ್ ಸರ್ಕಾರದ ಕಿರುಕುಳ, ಕಮಿಷನ್ ದಾಹಕ್ಕೆ ಬಲಿಯಾದ ಪ್ರಾಮಾಣಿಕ ಅಧಿಕಾರಿಗಳು ಹಾಗು ಗುತ್ತಿಗೆದಾರರ ಸಾವನ್ನ ಸಂಭ್ರಮಿಸಲು ಸಮಾವೇಶಾನಾ?
❓ಕಳಪೆ ಔಷಧಿ ಪೂರೈಕೆಯಿಂದ 460ಕ್ಕೂ ಹೆಚ್ಚು ಬಾಣಂತಿಯರು ಆಸ್ಪತ್ರೆಯಲ್ಲೇ ತೀರಿಕೊಂಡರಲ್ಲ ಅದಕ್ಕೆ ಸಮಾವೇಶಾನಾ?
❓ಕಳೆದ 24 ತಿಂಗಳಲ್ಲಿ 2,500ಕ್ಕು ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರಲ್ಲ ಅದಕ್ಕೆ ಸಮಾವೇಶಾನಾ?
❓ವಕ್ಫ್ ಮಂಡಳಿ ಹೆಸರಿನಲ್ಲಿ ಮಠ, ಮಂದಿರಗಳು, ರೈತರ ಜಮೀನು ಕಬಳಿಸಿದ ಸಾಧನೆಗೆ ಸಮಾವೇಶಾನಾ?
❓ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಡವಟ್ಟುಗಳು ಮೇಲೆ ಎಡವಟ್ಟುಗಳು ಮಾಡಿ ಲಕ್ಷಾಂತರ ಯುವಕರ ಕನಸು ನುಚ್ಚು ನೂರು ಮಾಡಿ ಅವರ ಭವಿಷ್ಯ ಹಾಳು ಮಾಡಿದ್ದಕ್ಕೆ ಸಮಾವೇಶಾನಾ?
❓ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕಾರಣದಿಂದ ನೇಹಾ ಕೊಲೆ ಪ್ರಕರಣದಿಂದ ಹಿಡಿದು, ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದವರೆಗೆ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹಿಂದೂಗಳ ಸರಣಿ ಕೊಲೆ ಬಗ್ಗೆ ಸಮಾವೇಶಾನಾ?
❓ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಗಣೇಶನ ಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸಿದ್ದಕ್ಕೆ ಸಮಾವೇಶಾನಾ?
❓ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿ ಪಾಕಿಸ್ತಾನದ ಟಿವಿಗಳಲ್ಲಿ ಮಿಂಚಿದ್ದಕ್ಕೆ ಈ ಸಮಾವೇಶಾನಾ?
❓ಕಂಟ್ರಾಕ್ಟರ್ ಗಳು ಈ ಸರ್ಕಾರ 80% ಕಮಿಷನ್ ತಿನ್ನುತ್ತಿದೆ ಎಂದು ಆರೋಪ ಮಾಡಿರುವುದಕ್ಕೆ ಸಮಾವೇಶಾನಾ?
❓ ಕರ್ನಾಟಕ ರಾಜ್ಯದ ಜನತೆ ಮೇಲೆ 3.15 ಲಕ್ಷ ಕೋಟಿ ಸಾಲದ ಹೊರೆ ಹೊರಿಸಲಾಗಿದೆ ಅದಕ್ಕೆ ಸಮಾವೇಶಾನಾ?
❓ನಿಮ್ಮ ಪ್ರಚಾರದ ತೆವಲಿಗೆ ಐಪಿಎಲ್ ವಿಜಯೋತ್ಸವದಲ್ಲಿ 11 ಜನ ಅಮಾಯಕ ಯುವಕರು ಜೀವ ಕಳೆದುಕೊಂಡರಲ್ಲ ಅದಕ್ಕಾ ಸಮಾವೇಶಾನಾ?
❓ಕರ್ನಾಟಕ ರಾಜ್ಯದ ಜನತೆ ಮೇಲೆ 3.15 ಲಕ್ಷ ಕೋಟಿ ಸಾಲದ ಹೊರೆ ಹೊರಿಸಲಾಗಿದೆ ಅದಕ್ಕೆ ಸಮಾವೇಶಾನಾ?
❓ಎರಡು ವರ್ಷದಿಂದ ಒಂದೇ ಒಂದು ಹೊಸ ಅಭಿವೃದ್ಧಿ ಕಾಮಗಾರಿಗೂ ಶಂಕುಸ್ಥಾಪನೆ ಮಾಡಿಲ್ಲ ಎನ್ನುವ ಸಾಧನೆಗೆ ಸಮಾವೇಶನಾ?
❓ಹೂಡಿಕೆದಾರರು, ಉದ್ಯಮಿಗಳು ಕರ್ನಾಟಕದಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಸಂಭ್ರಮಕ್ಕೆ ಈ ಸಮಾವೇಶಾನಾ?
ಹೈಕಮಾಂಡ್ ವಿಶ್ವಾಸ ಕಳೆದುಕೊಂಡಿದ್ದರೂ, ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ನಾಯಕತ್ವ ಬದಲಾವಣೆ ಆಗಬೇಕು ಎನ್ನುತ್ತಿದ್ದರೂ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಜನಾಕ್ರೋಶವನ್ನ ಅಣಕಿಸುವ ರೀತಿಯಲ್ಲಿ ಸಮಾವೇಶ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರ ಭಂಡತನವನ್ನ ನಿಜಕ್ಕೂ ಮೆಚ್ಚಲೇಬೇಕು!