ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ವಿದೇಶಕ್ಕೆ ಎಸ್ಕೇಪ್‌ ಆಗಲು ಯತ್ನಿಸುತ್ತಿದ್ದಾಗ ಆರೋಪಿ ಅರೆಸ್ಟ್

sampriya

ಮಂಗಳವಾರ, 4 ಜೂನ್ 2024 (20:22 IST)
Photo By X
ನವದೆಹಲಿ: ಸುಳ್ಯದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿಯನ್ನು ಎನ್‌ಐಎ ವಶಕ್ಕೆ ಪಡೆದಿದೆ.

ಬಂಧಿತ ಆರೋಪಿಯನ್ನು ಯೂಸಫ್‌ ಹಾರಳ್ಳಿ ಅಲಿಯಾಸ್‌ ರಿಯಾಜ್‌ ಎಂದು ಗುರುತಿಸಲಾಗಿದೆ.

ಕರ್ನಾಟಕದಲ್ಲಿ 2022ರ ಜುಲೈನಲ್ಲಿ ನಡೆದಿದ್ದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.


ಬಂಧಿತ ಆರೋಪಿ ರಿಯಾಜ್‌ ಯೂಸಫ್‌ ಹಾರಳ್ಳಿ ಅಲಿಯಾಸ್‌ ರಿಯಾಜ್‌ ಎಂಬುವನಾಗಿದ್ದು, ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.


ಪ್ರಕರಣ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್‌ ನೆಟ್ಟಾರು ಅವರನ್ನು ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮ ಅಕ್ಷಯ ಫ್ರೆಶ್‌ ಚಿಕೆನ್‌ ಫಾರ್ಮ್‌ ಶಾಪ್‌ ಬಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

2022ರ ಜುಲೈ 26ರಂದು ರಾತ್ರಿ 8.30ರ ವೇಳೆ ಅಂಗಡಿಯನ್ನು ಮುಚ್ಚಿ ಮನೆಗೆ ಮೋಟಾರು ವಾಹನದಲ್ಲಿ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ನೆಟ್ಟಾರು ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದರು.

ಘಟನೆ ಕುರಿತು ಪ್ರವೀಣ್‌ ಸ್ನೇಹಿತ ಮಧು ಕುಮಾರ್‌ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಎನ್‌ಐಎಗೆ ವಹಿಸಿ 2022ರ ಆಗಸ್ಟ್‌ 3ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದೀಗ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ