ಮಂಗಳೂರು: ಜೈಲಿನಲ್ಲೇ ನಡೆದಿದೆ ಕೈದಿಗಳ ಭರ್ಜರಿ ಪಾರ್ಟಿ..?

ಗುರುವಾರ, 20 ಜುಲೈ 2017 (10:32 IST)
ಮಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯಹಾರ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲೂ ವಿಚಾರಣಾಧೀನ ಕೈದಿಗಳ ಗುಂಪೊಂದು ಸಾಮೂಹಿಕವಾಗಿ ಮಾಂಸದೂಟ ಸವಿಯುತ್ತಿದ್ದಾರೆ ಎನ್ನಲಾದ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. 
 
ಕೈದಿಗಳ ಭೇಟಿಗಾಗಿ ಬರುತ್ತಿರುವ ಅವರ ಸಂಬಂಧಿಕರು, ಹಿತೈಷಿಗಳು ಭರ್ಜರಿ ಮಾಂಸದೂಟ, ಬಿರಿಯಾನಿ,ಎಣ್ಣೆ ಇತ್ಯಾದಿಗಳನ್ನು ಜೈಲು ಸಿಬಂದಿ ಮೂಲಕ ಕೈದಿಗಳಿಗೆ ಒದಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ  ಕೈದಿಗಳಿಗೆ ಪೂರೈಸುವ ಆಹಾರದ ಪೊಟ್ಟಣದಲ್ಲಿ ಗಾಂಜಾ ಮತ್ತು ಇತರ ಮಾದಕ ವಸ್ತುಗಳು, ಮೊಬೈಲ್‌ ಫೋನ್‌, ಮೊಬೈಲ್‌ ಚಾರ್ಜರ್‌, ಚಾಕು, ಬ್ಲೇಡ್‌ ಮತ್ತಿತರ ಮಾರಕಾಯುಧಗಳೂ ರವಾನೆಯಾಗುತ್ತಿಲೆ ಎನ್ನಲಾಗಿದೆ. ಪೊಲೀಸರು ಹಲವು ಬಾರಿ ಜೈಲಿಗೆ ದಾಳಿ ಮಾಡಿ ಮೊಬೈಲ್‌ ಫೋನ್‌, ಚಾರ್ಜರ್‌, ಸಿಮ್‌ ಕಾರ್ಡ್‌, ಬ್ಲೇಡು, ಚಾಕು, ಗಾಂಜಾ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರು. ದಾಳಿಯ ಸಂದರ್ಭ ಪೊಲೀಸರ ಮೇಲೆ ಪ್ರತಿ ದಾಳಿ ನಡೆದದ್ದೂ ಇದೆ.
 
ಆದರೆ ಇದನ್ನು ಅಲ್ಲಗಳೆದಿರುವ ನೂತನ ಜೈಲು ಅಧೀಕ್ಷಕರಾದ ವಿಜಯ್‌ ರೋಡ್‌ಕರ್‌, ಹದಿನೈದು ದಿನಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದು, ನಾನು ಅಧಿಕಾರ ವಹಿಸಿಕೊಂಡ ಬಳಿಕ ಕೈದಿಗಳ ಭೇಟಿಗೆ ಬರುವ ಸಂದರ್ಶಕರು ತರುವ ಪೊಟ್ಟಣಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಿ ಒಳಗೆ ಕೊಡಲಾಗುತ್ತದೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿರುವ ಫೋಟೊ ಇತ್ತೀಚಿನದ್ದಲ್ಲ. ಆ ಚಿತ್ರದಲ್ಲಿರುವ ಇಬ್ಬರು ಕೈದಿಗಳು ಎರಡೂವರೆ ತಿಂಗಳ ಹಿಂದೆ ಬಿಡುಗಡೆ ಹೊಂದಿ ಹೋಗಿದ್ದಾರೆ. ವೈರಲ್‌ ಆಗಿರುವ ಫೋಟೊ 3 ತಿಂಗಳ ಹಿಂದಿನದ್ದಾಗಿರಬೇಕು ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ