ಭಾರತ ವಿಶ್ವಗುರು ಆಗಬೇಕೆನ್ನುವುದ ಪ್ರಿಯಾಂಕ್‌ ಖರ್ಗೆಗೆ ಸಹಿಸಲಿಕ್ಕಾಗದ ಸಂಗತಿಯೇ: ಸಿಟಿ ರವಿ

Sampriya

ಮಂಗಳವಾರ, 26 ಆಗಸ್ಟ್ 2025 (17:22 IST)
ಬೆಂಗಳೂರು: ಸನ್ಮಾನ್ಯ ಸಚಿವರಾದ ಪ್ರಿಯಾಂಕ್ ಖರ್ಗೆ  ಅವರೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ನಿಮ್ಮ ಧೋರಣೆ ನಿಮ್ಮ ಮನಸ್ಸಿನ ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 

ಆರ್‌ಎಸ್ಎಸ್, ಹಿಂದೂ ಸಮಾಜದಲ್ಲಿ ಜಾತಿಯತೆ ಮತ್ತು ಅಸ್ಪೃಶ್ಯತೆಗೆ ಜಾಗ ಇರಬಾರದು ಅನ್ನುವ ಸಂಸ್ಕಾರವನ್ನು ತನ್ನೆಲ್ಲಾ ಸ್ವಯಂಸೇವಕರಿಗೆ ನೀಡುತ್ತದೆ. ಸಮಾಜದಲ್ಲಿ ಎಲ್ಲರನ್ನು ಒಂದೇ ಎಂದು ನೋಡುವುದನ್ನು ನಿಮಗೆ ಸಹಿಸಲಿಕ್ಕೆ ಆಗುತ್ತಿಲ್ಲ.

ರಾಷ್ಟ್ರೀಯ ಸ್ವಯಂಸೇವಕ ಸಂಘ “ರಾಷ್ಟ್ರ ಸರ್ವಪರಿ” ಎಂದು ಭಾವಿಸುತ್ತದೆ. ಭಾವಿಸುವುದಷ್ಟೇ ಅಲ್ಲ, ಅದನ್ನು ನಿತ್ಯ ನಿರಂತರವಾಗಿ ಪಾಲಿಸುತ್ತಾ ಬಂದಿದೆ. ಸಂಘದಲ್ಲಿ ಜಾತಿ ಬರುವುದಿಲ್ಲ, ಅಧಿಕಾರ ಬರುವುದಿಲ್ಲ, ಪಕ್ಷ ಬರುವುದಿಲ್ಲ, ಹಣವಂತು ಮೊದಲೇ ಬರುವುದಿಲ್ಲ. ಇದು ನಿಮಗೆ ಸಹಿಸಲಿಕ್ಕೆ ಆಗದ ಸಂಗತಿ ಅನ್ನುವುದು ಸರ್ವವಿದಿತ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತ ವಿಶ್ವಗುರು ಆಗಬೇಕು ಎಂದು ಬಯಸುತ್ತದೆ ಮತ್ತು ಆ ಗುರಿಯ ಸಾಧನೆಗೆ ಪ್ರತಿಯೊಬ್ಬ ಸ್ವಯಂಸೇವಕರನ್ನು ಪರಿಶ್ರಮ ಪಡುವಂತೆ ನಿರಂತರವಾಗಿ ಪ್ರೇರೇಪಿಸುತ್ತಾ, ಮಾರ್ಗದರ್ಶನ ಮಾಡುತ್ತದೆ. ಭಾರತ ವಿಶ್ವಗುರು ಆಗಬೇಕು ಅನ್ನುವ ಸಂಘದ ಬಯಕೆಯೇ ನಿಮಗೆ ಸಹಿಸಲಿಕ್ಕೆ ಆಗದ ಸಂಗತಿ ಅಲ್ಲವೇ?

ಆರ್‌ಎಸ್ಎಸ್ ಯಾವುದೇ ಕಾರಣಕ್ಕೂ ತುಷ್ಟಿಕರಣ ರಾಜಕಾರಣ ಬೇಡ ಎಂದು ಒತ್ತಿ ಹೇಳುತ್ತದೆ. ಅಂದಹಾಗೆ ಇದನ್ನು ಕೇವಲ ಸಂಘ ಮಾತ್ರ ಹೇಳುವುದಲ್ಲ, ಕ್ರಾಂತಿಸೂರ್ಯ ಡಾ. ಬಿ.ಆರ್. ಅಂಬೇಡ್ಕರ್ ಜೀ ಕೂಡ ತುಷ್ಟಿಕರಣದ ರಾಜಕಾರಣವನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಆದರೇನು? ನಿಮ್ಮ ಪಾರ್ಟಿ ಕಾಶ್ಮೀರದಲ್ಲಿ ಆರ್ಟಿಕಲ್ 370 ಹೇರಿದ್ದು ತುಷ್ಟಿಕರಣಕ್ಕಾಗಿ ತಾನೇ? ಅಂಬೇಡ್ಕರ್ ಜೀ ವಿರೋಧಿಸಿದ ಆರ್ಟಿಕಲ್ 370ಯನ್ನು ನೀವು, ನಿಮ್ಮ ಪಕ್ಷ ದೇಶದ ಮೇಲೆ ಹೇರಿತು. ಅಂಬೇಡ್ಕರ್ ಅವರು ಸಮರ್ಥಿಸಿದ “ಸಮಾನ ನಾಗರಿಕ ಸಂಹಿತೆ”ಯನ್ನು ಯಾಕೆ ನಿಮ್ಮ ಪಕ್ಷ ಸಂವಿಧಾನದಿಂದ ಹೊರಗಡೆ ಇಟ್ಟಿತು?

ಸಂಘದ ಬಗ್ಗೆ ಅಂಬೇಡ್ಕರ್ ಅವರು ಮೆಚ್ಚುಗೆಯ ಮಾತನ್ನೇ ಆಡಿದ್ದಾರೆ. ಆರಂಭದಲ್ಲಿ ಅದನ್ನು ವಿರೋಧಿಸಿದ ಜವಾಹರಲಾಲ್ ನೆಹರು ಅವರು ಕೂಡ 1962ರ ಚೀನಾ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೈನ್ಯಕ್ಕೆ ನೀಡಿದ ಸಹಕಾರಕ್ಕಾಗಿ 1963ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಿದರು ಎಂಬುದನ್ನು ಯಾಕೆ ಮರೆಯುತ್ತೀರಿ?

ಇನ್ನೆಷ್ಟು ವರ್ಷಗಳ ಕಾಲ ಸುಳ್ಳುಗಳ ಸರಮಾಲೆಯನ್ನೇ ಸಾರುತ್ತಾ ಹೋಗುತ್ತೀರಿ ಪ್ರಿಯಾಂಕ್ ಖರ್ಗೆಯವರೇ? ಸಂಘದ ಸ್ವಯಂಸೇವಕರ ಸಾಧನೆ ಒಂದಲ್ಲ, ಎರಡಲ್ಲ. ಕೇಳಿದರೆ ನೂರಾರು ಅಲ್ಲ, ಸಾವಿರಾರು ಸಾಧನೆಗಳ ಪಟ್ಟಿಯನ್ನೇ ನೀಡುತ್ತೇನೆ. ಆದರೇನು? ಪೂರ್ವಗ್ರಹಪೀಡಿತರಿಗೆ ಇದ್ಯಾವುದು ಅರ್ಥವಾಗಲಿಕ್ಕೆ ಸಾಧ್ಯವಿಲ್ಲ. ನಿಮ್ಮ ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಹೊರಬಂದು ಶಾಂತ, ನಿರ್ಮಲ ಮನಸ್ಸಿನಿಂದ ನೋಡಿದರೆ ನಿಮಗೆ ಸಂಘ ಅರ್ಥವಾಗುತ್ತದೆ, ಸ್ವಯಂಸೇವಕ ಅರ್ಥವಾಗುತ್ತಾನೆ, ಭಾರತವೂ ಅರ್ಥವಾಗುತ್ತದೆ, ರಾಷ್ಟ್ರಧರ್ಮವೂ ಅರ್ಥವಾಗುತ್ತದೆ.

ಸಂಘ ರಾಷ್ಟ್ರದಿಂದ ಭಿನ್ನವಾಗಿರುವುದಲ್ಲ, ರಾಷ್ಟ್ರಭಕ್ತಿಯಿಂದ ಭಿನ್ನವಾಗಿರುವುದಲ್ಲ. ನಿಮಗೆ ರಾಷ್ಟ್ರ ಅರ್ಥವಾದರೆ ಸಂಘ ಏನೆಂದು ಅರ್ಥವಾಗುತ್ತದೆ. ದುರಂತವೆಂದರೆ ವೋಟ್‌ನ ಆಸೆಯನ್ನು ಮಾತ್ರ ಇಟ್ಟುಕೊಂಡಿರುವ ನಿಮಗೂ ನಿಮ್ಮ ಪಕ್ಷಕ್ಕೂ ಯಾವುದೇ ಕಾಲಕ್ಕೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಅರ್ಥವಾಗಲಿಕ್ಕೆ ಸಾಧ್ಯವಿಲ್ಲ. ಅದರ ಪರಿಣಾಮ ರಾಷ್ಟ್ರವೂ ಅರ್ಥವಾಗಲಿಕ್ಕೆ ಸಾಧ್ಯವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ