ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಆರ್ ಎಸ್ಎಸ್ ಕಾಪಾಡಿತಾ: ಕೇಸ್ ಹಾಕ್ತೀನಿ ಎಂದ ಪ್ರಿಯಾಂಕ್

Krishnaveni K

ಭಾನುವಾರ, 19 ಅಕ್ಟೋಬರ್ 2025 (20:56 IST)
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಈ ಹಿಂದೆ ರಕ್ಷಿಸಿದ್ದೇ ಆರ್ ಎಸ್ಎಸ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಪೋಸ್ಟ್ ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.
 

ರಾಜ್ಯದಲ್ಲಿ ಈಗ ಪ್ರಿಯಾಂಕ್ ಖರ್ಗೆ ಮತ್ತು ಆರ್ ಎಸ್ಎಸ್ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಪ್ರಿಯಾಂಕ್ ಖರ್ಗೆ ಸಲಹೆ ಮೇರೆಗೆ ರಾಜ್ಯ ಸರ್ಕಾರ ಆರ್ ಎಸ್ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಇದು ಆರ್ ಎಸ್ಎಸ್ ಮತ್ತು ಪ್ರಿಯಾಂಕ್ ಖರ್ಗೆ ನಡುವಿನ ತಿಕ್ಕಾಟವಾಗಿ ಮಾರ್ಪಟ್ಟಿದೆ.

ಈ ನಡುವೆ ಒಬ್ಬರು ಅಪ್ಪ ಮಕ್ಕಳ ಡಬಲ್ ಸ್ಟ್ಯಾಂಡ್ ನೀತಿ. ನಾನು ನನ್ನ ಕುಟುಂಬ ಯಾವತ್ತೂ ಆರ್ ಎಸ್ಎಸ್ ವಿರೋಧವಾಗಿರಲಿಲ್ಲ. ಆಗೋದು ಇಲ್ಲ. ಯಾಕೆಂದರೆ ರಜಾಕರ ದಾಳಿಯಿಂದ ನನ್ನ ಮತ್ತು ಮಕ್ಕಳನ್ನು ರಕ್ಷಿಸಿದ್ದೇ ಆರ್ ಎಸ್ಎಸ್ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂಬ ಹೇಳಿಕೆಯೊಂದನ್ನು ಆದರ್ಶ್ ಅರಸ್ ಎಂಬವರು ಪೋಸ್ಟ್ ಮಾಡಿದ್ದರು.

ಇದರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದು ‘ಸತ್ಯಮಾರ್ಗದಲ್ಲಿ ಗೆಲ್ಲಲು ಸಾಧ್ಯವಾಗದಿದ್ದಾಗ ಸುಳ್ಳಿನ ಮಾರ್ಗದಲ್ಲಾದರೂ ಗೆಲ್ಲಬೇಕು ಎನ್ನುವುದು ಸಂಘನೀತಿ!

ಸುಳ್ಳಿನ ಗೋಪುರ ಕಟ್ಟಿ ತಮ್ಮ ಕರಾಳ ಇತಿಹಾಸಕ್ಕೆ ಸಚ್ಚಾರಿತ್ರ್ಯದ ಬಣ್ಣ ಲೇಪಿಸಲು ಪ್ರಯತ್ನಿಸುವ ಸಂಘಪರಿವಾರವು ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಇತಿಹಾಸವನ್ನೂ ಕೆಡಿಸಲು ಮುಂದಾಗುವ ಮೂಲಕ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಂಘಪಾರಿವಾರ ಮೊದಲಿನಿಂದಲೂ ಇಂತಹ ಕುತಂತ್ರ, ಕುಕೃತ್ಯ, ಕುಯುಕ್ತಿಗಳನ್ನು ಮಾಡಿದ ಕುಖ್ಯಾತಿಯನ್ನು ಹೊಂದಿದೆ. ಈ ಕೃತ್ಯಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ