ಮೂರು ದಿನಗಳ ಕಾಲ ತರಬೇತಿ ಶಿಬಿರಕ್ಕೆ ಪ್ರಗತಿಪರ ಚಿಂತಕರ ವಿರೋಧ

ಗುರುವಾರ, 22 ಜೂನ್ 2023 (19:20 IST)
ನೂತನವಾಗಿ ಆಯ್ಕೆಗೊಂಡ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ಶಿಬಿರವನ್ನು ಸ್ಪೀಕರ್ ಯು.ಟಿ ಖಾದರ್ ಹಮ್ಮಿಕೊಂಡಿದ್ದಾರೆ.ಇದಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಕ ಗುರುಗಳನ್ನು ಸ್ಫೂರ್ತಿದಾಯಕ ಪಾಠಕ್ಕೆ ಆಹ್ವಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರಗತಿಪರ ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರಲ್ಲೂ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಕೆಲವು ಸಾಹಿತಿಗಳು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ .ಜೂನ್ 26 ರಿಂದ 28 ರವರೆಗೆ ನಗರದ ನೆಲಮಂಗಲದಲ್ಲಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಾಸಕರು ಹಕ್ಕು ಮತ್ತು ಕರ್ತವ್ಯ ಶಾಸನ ರಚನೆ ಪ್ರಶ್ನೋತ್ತರ, ಶೂನ್ಯವೇಳೆ ಸೇರಿದಂತೆ ಶಾಸಕರಿಗೆ ಸದನದ ನಡಾವಳಿಗಳ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಶಿಬಿರದಲ್ಲಿ ನೂತನ ಶಾಸಕರಿಗೆ ಹಿರಿಯ ರಾಜಕೀಯ ನಾಯಕರುಗಳ ಜೊತೆಗೆ ಧಾರ್ಮಿಕ ಹಾಗೂ ಆಧ್ಯಾತ್ಮಕ ಗುರುಗಳು ಕೂಡಾ ಪಾಠ ಮಾಡಲಿದ್ದಾರೆ. ಶಿಬಿರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಆರ್ಟ್‌ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ರಾಯಜೋಗಿನಿ ಬ್ರಹ್ಮಕುಮಾರಿಯ ಆಶಾ ದೀದಿ ಹಾಗೂ ಜಮಾತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಙ ಅವರು ಸ್ಫೂರ್ತಿದಾಯಕ ಭಾಷಣ ಮಾಡಲಿದ್ದಾರೆ. ಜೊತೆಗೆ ಶಿಕ್ಷಣ ತಜ್ಞ ಗುರುರಾಜ್ ಕರ್ಜಗಿ ಅವರಿಗೂ ಆಹ್ವಾನ ನೀಡಲಾಗಿದೆ.ಆದರೆ ಶಾಸಕರ ತರಬೇತಿ ಶಿಬಿರಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗುರುಗಳಿಗೆ ಆಹ್ವಾನ ನೀಡಿರುವ ನಡೆಗೆ ಪ್ರಗತಿಪರ ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು,  ಹಲವು ಸಾಹಿತಿಗಳು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ