ವಿಕೋಪಕ್ಕೆ ತಿರುಗಿದ ರೈತರ ಪ್ರತಿಭಟನೆ: ಜೀಪ್ ಗೆ ಕಲ್ಲು, ಐದು ಟ್ರಾಕ್ಟರ್ ಪಲ್ಟಿ ಹೊಡೆಸಿ ಆಕ್ರೋಶ

ಭಾನುವಾರ, 18 ನವೆಂಬರ್ 2018 (14:41 IST)
ಕಬ್ಬಿನ ಬಾಕಿ ಪಾವತಿ ಮತ್ತು ಸಮರ್ಪಕ ಬೆಲೆ‌ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.

ಬಾಗಲಕೋಟೆ ಜಿಲ್ಲೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ತಮಗೆ ನ್ಯಾಯ ಸಿಗದ ಹಿನ್ನೆಲೆ ಆಕ್ರೋಶಗೊಂಡಿರುವ ರೈತರು ಕಬ್ಬು ಸಾಗಿಸುತ್ತಿದ್ದ ಐದು ಟ್ರ್ಯಾಕ್ಟರ್ ಗಳನ್ನು  ಪಲ್ಟಿ ಹೊಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಬಳಿ ಘಟನೆ ನಡೆದಿದೆ. ನಿರಾಣಿ ಶುಗರ್ಸ್ ಗೆ ಟ್ರ್ಯಾಕ್ಟರ್ ಗಳ ಮೂಲಕ ಕಬ್ಬನ್ನು ಸಾಗಿಸಲಾಗುತ್ತಿತ್ತು. ಇನ್ನೊಂದು ಕಡೆ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮುಂದೆ ರೈತರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.

ಈ ಮಧ್ಯೆ  ಟ್ರ್ಯಾಕ್ಟರ್ ಗಳ  ಮೂಲಕ ಕಬ್ಬು ಸಾಗಿಸಲು ಕೆಲ ರೈತರು ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಈ ಕೃತ್ಯವೆಸಗಿದ್ದಾರೆ. ಜೊತೆಗೆ ನಿರಾಣಿ ಶುಗರ್ಸ್ ಗೆ ಸೇರಿದ ಜೀಪ್ ಒಂದಕ್ಕೆ ಕಲ್ಲೆಸೆದು ಹಿಂಬದಿ ಗಾಜನ್ನು ಜಖಂಗೊಳಿಸಿದ್ದಾರೆ. ಕುಳಲಿ ಗ್ರಾಮದ ಬಳಿ 10 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳನ್ನು ತಡೆಹಿಡಿದಿದ್ದಾರೆ.

ಘಟನೆ ಬಳಿಕ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ನಡೆದಿದ್ದು, ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನೊಂದು ಕಡೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಲಿಂಗಪುರ ಪಟ್ಟಣದಲ್ಲೂ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗಳ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ