ಎಲ್ಲೆಂದರಲ್ಲಿ ಕಾರ್ಡ್ ಸ್ವೈಪ್ ಮಾಡ್ತೀರಾ..? ಹಾಗಿದ್ದರೆ ಈ ಸುದ್ದಿ ತಪ್ಪದೇ ನೋಡಿ

ಮಂಗಳವಾರ, 12 ಸೆಪ್ಟಂಬರ್ 2017 (13:45 IST)
ಪುಣೆಯ ವ್ಯಕ್ತಿಯೊಬ್ಬ ಟೋಲ್ ಗೇಟ್`ನಲ್ಲಿ ಕಾರ್ಡ್ ಸ್ವೈಪ್ ಮಾಡಿ 87,000 ರೂ. ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ. 36 ವರ್ಷದ ಸೇಲ್ಸ್ ಮ್ಯಾನೇಜರ್ ದರ್ಶನ್ ಪಾಟೀಲ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಹದಪ್ಸರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
 

ಸೆಪ್ಟೆಂಬರ್ 9ರಂದು ದರ್ಶನ್ ಪಾಟೀಲ್ ಕಾರಿನಲ್ಲಿ ತನ್ನ ಪುಣೆಯ ನಿವಾಸಕ್ಕೆ ಹಿಂದಿರುಗುತ್ತಿದ್ದಾಗ ಖಲಾಪುರ್ ಟೋಲ್`ನಲ್ಲಿ ಟೋಲ್ ಫೀ ಕಟ್ಟಲು ಸಂಜೆ 6.27ರ ಸುಮಾರಿಗೆ ಕಾರ್ಡ್ ಸ್ವೈಪ್ ಮಾಡಿದ್ದಾರೆ. 230 ರೂ. ಟೋಲ್ ಶುಲ್ಕ ಡೆಬಿಟ್ ಮೆಸೇಜ್ ಬಂದಿದೆ. ಇದಾದ 2 ಗಂಟೆ ಬಳಿಕ ರಾತ್ರಿ 8.31ರ ಸುಮಾರಿಗೆ 20,000 ರೂ. ಪೇ ಮಾಡಿ ಖರಿದಿ ಮಾಡಿರುವ ಮೆಸೇಜ್ ಬಂದಿದೆ. ಕೆಲವೇ ನಿಮಿಷಗಳಲ್ಲಿ ಐದಾರು ವಹಿವಾಟಿನ ಮೆಸೇಜ್`ಗಳು ಬಂದಿವೆ. 8.34ರ ಹೊತ್ತಿಗೆ ಕೇವಲ 4 ನಿಮಿಷಗಳಲ್ಲಿ ದುಷ್ಕರ್ಮಿಗಳು 87,000 ರೂ. ಹಣವನ್ನ ದೋಚಿದ್ಧಾರೆ. 20,000 ರೂ., 100 ರೂ, 10 ರೂ, ಹೀಗೆ ಬೇಕಾಬಿಟ್ಟಿ ವಹಿವಾಟು ನಡೆಸಿದ್ದಾರೆ. ಅಕೌಂಟ್`ನಲ್ಲಿದ್ದ ಒಂದೇ ಒಂದು ರೂಪಾಯಿ ಬಿಡದಂತೆ ಸೈಬರ್ ಕಳ್ಳರು ದೋಚಿದ್ದಾರೆ.

ಕಾರ್ಡ್ ಸಹ ದರ್ಶನ್ ಪಾಟೀಲ್ ಬಳಿಯೇ ಇದ್ದು, ಒಟಿಪಿ ಸಹ ಬಂದಿಲ್ಲ. ಒಟಿಪಿ ಇಲ್ಲದೆ ನನ್ನ ಕಾರ್ಡ್`ನಿಂದ ಹಣದ ವಹಿವಾಟು ನಡೆದಿದ್ದೇಗೆ ಎಂಬ ಬಗ್ಗೆ ದರ್ಶನ್ ತಲೆಕೆಡಿಸಿಕೊಂಡಿದ್ದಾರೆ. ಈ ಅಕ್ರಮದಲ್ಲಿ ಟೋಲ್`ನಲ್ಲಿ ಕಾರ್ಡ್ ಸ್ವೈಪ್ ಮಾಡಿಸಿಕೊಂಡ ಹುಡುಗರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ